ಚೆನ್ನೈ: ದುಬೈ, ಶಾರ್ಜಾನಿಂದ ಅಕ್ರಮವಾಗಿ ಚಿನ್ನ ಮತ್ತು ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ 11 ಜನರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿರುವ ಘಟನೆ ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಚೆನ್ನೈ ವಿಮಾನ ನಿಲ್ದಾಣಕ್ಕೆ ದುಬೈ ಮತ್ತು ಶಾರ್ಜಾದಿಂದ ರವಿವಾರ ಎರಡು ಪ್ರತ್ಯೇಕ ವಿಮಾನಗಳು ಬಂದಿದ್ದವು. ಈ ವೇಳೆ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರನ್ನು ತನಿಖೆ ಮಾಡಿದ್ದಾರೆ. ಚೆನ್ನೈ, ತಿರುಚಿ, ರಾಮನಾಥಪುರಂ, ವಿಳುಪುರಂ ಮತ್ತು ಸೇಲಂ ಜಿಲ್ಲೆಗಳ ನಿವಾಸಿಗಳಾದ ಏಳು ಜನರ ಮೇಲೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಮೂಡಿದೆ.
ಕಸ್ಟಮ್ಸ್ ಅಧಿಕಾರಿಗಳು ಅನುಮಾನಿತರನ್ನು ಪ್ರತ್ಯೇಕವಾಗಿ ತನಿಖೆಗೆ ಒಳಪಡಿಸಿದಾಗ, ವಿಗ್ ಮತ್ತು ಸಾಕ್ಸ್ನಲ್ಲಿ ಮುಚ್ಚಿಟ್ಟಿದ್ದ ಬಂಗಾರದ ಪೇಸ್ಟ್ ಸಿಕ್ಕಿದೆ. ಒಟ್ಟು 5 ಕೋಟಿ 55 ಲಕ್ಷ ರೂಪಾಯಿ ಬೆಲೆಬಾಳುವ ಬಂಗಾರವನ್ನು ಕಸ್ಟಮ್ಸ್ ಅಧಿಕಾರಿಗಳು ಸ್ವಾಧೀನ ಪಡಿಸಿಕೊಂಡು ಏಳು ಜನರನ್ನು ಬಂಧಿಸಿದ್ದಾರೆ.
ಇದಲ್ಲದೇ ಚೆನ್ನೈನಿಂದ ಶಾರ್ಜಾಗೆ ಅಕ್ರಮವಾಗಿ ಸಾಗಿಸಲು ತಂದಿದ್ದ 24 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದು, ನಾಲ್ವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.