ಏಲೂರು(ಆಂಧ್ರಪ್ರದೇಶ): ತಾಳೆ ಎಣ್ಣೆ ತಯಾರಿಸುವ ಘಟಕದ ಪ್ರದೇಶದಲ್ಲಿ ಭೂಮಿಯನ್ನು ಅಗೆಯುವಾಗ 18 ಪುರಾತನ ಕಾಲದ ಚಿನ್ನದ ನಾಣ್ಯಗಳು ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ತಿಂಗಳು 29 ರಂದು ಕೊಯ್ಯಲಗುಡಂ ತಾಲೂಕಿನ ಎಡುವದಲಪಾಲೆಂ ಗ್ರಾಮದಲ್ಲಿ ಚಿನ್ನದ ನಾಣ್ಯಗಳು ಪತ್ತೆಯಾಗಿದ್ದವು ಎಂದು ತಿಳಿದುಬಂದಿದೆ.
ಸ್ಥಳೀಯರ ಪ್ರಕಾರ, ಈ ಗ್ರಾಮದ ಮನುಕೊಂಡ ತೇಜಸ್ವಿ ಎಂಬುವವರ ತಾಳೆ ಎಣ್ಣೆ ತಯಾರಿಸುವ ಘಟಕದ ಪ್ರದೇಶದಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಭೂಮಿಯನ್ನು ಅಗೆಯುತ್ತಿದ್ದಾಗ ಚಿನ್ನದ ನಾಣ್ಯಗಳುಳ್ಳ ಮಡಿಕೆಯೊಂದು ಪತ್ತೆಯಾಗಿದೆ. ತೇಜಸ್ವಿ ಪತಿ ಸತ್ಯನಾರಾಯಣ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ತಹಶಿಲ್ದಾರ್ ಪಿ.ನಾಗಮಣಿ ಪರಿಶೀಲನೆ ನಡೆಸಿದರು.
ಮಣ್ಣಿನ ಮಡಿಕೆಯನ್ನು ಒಡೆದು ನೋಡಿದಾಗ ಬಂಗಾರದ ನಾಣ್ಯಗಳು ಪತ್ತೆಯಾಗಿವೆ. ಪ್ರತಿ ನಾಣ್ಯವು 8 ಗ್ರಾಂಗಿಂತ ಹೆಚ್ಚು ತೂಕವಿದೆ ಎಂದು ಅಂದಾಜಿಸಲಾಗಿದೆ. ಇವು ಎರಡು ಶತಮಾನಗಳಷ್ಟು ಹಿಂದಿನವು ಎಂದು ನಂಬಲಾಗಿದೆ. ತೇಜಸ್ವಿ ನಾರಾಯಣ ದಂಪತಿ ತಮ್ಮ ಭೂಮಿಯಲ್ಲಿ ದೊರೆತ ನಾಣ್ಯಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದು, ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.