ಪಣಜಿ(ಗೋವಾ): ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಗೋವಾ ಬಿಜೆಪಿ ಸರ್ಕಾರದ ಸಚಿವರೊಬ್ಬರ ತಲೆದಂಡವಾಗಿದೆ. ಗೋವಾ ನಗರಾಭಿವೃದ್ಧಿ ಸಚಿವ ಮತ್ತು ಬಿಜೆಪಿ ಶಾಸಕ ಮಿಲಿಂದ್ ನಾಯ್ಕ್ ವಿರುದ್ಧ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ಸಚಿವರು ರಾಜೀನಾಮೆ ಸಲ್ಲಿಸಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿ 15 ದಿನಗಳ ಗಡುವು ನೀಡಿದ್ದರು. ಹೀಗಾಗಿ ಸಚಿವ ಮಿಲಿಂದ್ ನಾಯ್ಕ್ 'ನ್ಯಾಯ ಮತ್ತು ಮುಕ್ತ ತನಿಖೆಗಾಗಿ' ಬುಧವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಎಂ ಕಚೇರಿಗೆ ಪತ್ರವನ್ನು ರವಾನಿಸಿದ್ದಾರೆ. ಸಿಎಂ ಇದನ್ನು ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿದ್ದಾರೆ ಎಂದು ಗೋವಾ ಮುಖ್ಯಮಂತ್ರಿಗಳ ಕಚೇರಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: 1991ರ ಯುದ್ಧದಲ್ಲಿ ಭಾರತ ಗೆಲುವಿನ ಸ್ಮರಣೆ: ಸ್ವರ್ಣಿಮ್ ವಿಜಯ್ ಮಶಾಲ್ ಸಮಾರಂಭದಲ್ಲಿ ಪ್ರಧಾನಿ ಭಾಗಿ
ಕೆಲ ದಿನಗಳ ಹಿಂದೆ ಸಚಿವ ಮಿಲಿಂದ್ ನಾಯ್ಕ್ ಮತ್ತು ಸಂತ್ರಸ್ತ ಮಹಿಳೆಯ ನಡುವೆ ನಡೆದ ಆಡಿಯೋ ಸಂಭಾಷಣೆಯೊಂದು ಬಹಿರಂಗವಾಗಿ ಗೋವಾ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾರಣಕ್ಕಾಗಿ ಸಚಿವರು ರಾಜೀನಾಮೆ ಸಲ್ಲಿಸಬೇಕು ಕಾಂಗ್ರೆಸ್ ಪಟ್ಟು ಹಿಡಿದಿತ್ತು.