ಪಣಜಿ (ಗೋವಾ): ನಾಳೆ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು, ಕೈಗಾರಿಕಾ ಕಾರ್ಮಿಕರು ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವರರಿಗೆ ಗೋವಾ ಸರ್ಕಾರ ವೇತನಸಹಿತ ರಜೆ ನೀಡಿ ಸೋಮವಾರ ಅಧಿಸೂಚನೆ ಹೊರಡಿಸಿದೆ. ಸಿಎಂ ಪ್ರಮೋದ್ ಸಾವಂತ್ ಸರ್ಕಾರದ ನಿರ್ಧಾರಕ್ಕೆ ವಿರೋಧ ಪಕ್ಷಗಳು ಮತ್ತು ಖಾಸಗಿ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ರಜೆ ಘೋಷಿಸಿರುವ ನಿರ್ಧಾರಕ್ಕೆ ಕಾನೂನಿನ ಮಾನ್ಯತೆ ಬೇಕು ಎಂದು ಗೋವಾ ಸ್ಟೇಟ್ ಇಂಡಸ್ತ್ರೀಸ್ ಅಸೋಸಿಯೇಶನ್ ಹೇಳಿದೆ. ಗೋವಾ ರಾಜ್ಯ ಕೈಗಾರಿಕೆಗಳ ಸಂಘದ ಅಧ್ಯಕ್ಷ ದಾಮೋದರ್ ಕೋಚ್ಕರ್ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ. "ಇದು ಸಂಪೂರ್ಣವಾಗಿ ಅಸಂಬದ್ಧ ಮತ್ತು ಮೂರ್ಖತನದ ತೀರ್ಮಾನ. ಚುನಾವಣಾ ಲಾಭಕ್ಕಾಗಿ ಕೈಗಾರಿಕೆಗಳನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಇಂತಹ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಕಾನೂನಿನ ಮೊರೆ ಹೋಗಬೇಕಾಗಿದೆ ಎಂದು ಹೇಳಿದರು.
ಆಮ್ ಆದ್ಮಿ ಪಕ್ಷದ ಗೋವಾ ಘಟಕದ ಅಧ್ಯಕ್ಷ ಅಮಿತ್ ಪಾಲೇಕರ್ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ಮೂರ್ಖ ನಿರ್ಧಾರ ಎಂದು ವಾಗ್ದಾಳಿ ನಡೆಸಿದ್ದಾರೆ. "ನಮ್ಮ ತಾಯಿ ಮಹದಾಯಿಯನ್ನು ಕರ್ನಾಟಕಕ್ಕೆ ಮಾರಾಟ ಮಾಡಿದ ನಂತರ, ಬಿಜೆಪಿ ನೇತೃತ್ವದ ಗೋವಾ ಸರ್ಕಾರವು ನೆರೆಹೊರೆಯವರ ಸಂತೋಷಕ್ಕಾಗಿ ಕೆಳಮಟ್ಟಕ್ಕೆ ಇಳಿಯುತ್ತಿದೆ” ಎಂದು ಟೀಕಿಸಿದ್ದಾರೆ. ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಕೂಡ ಸರ್ಕಾರದ ನಿರ್ಧಾರವನ್ನು ಖಂಡಿಸಿದೆ.
ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ನೆರೆ ರಾಜ್ಯಗಳಲ್ಲಿ ಚುನಾವಣೆಗಳಿದ್ದಾಗ ರಜೆ ನೀಡುವುದು ವಾಡಿಕೆ. ಕಳೆದ ವರ್ಷ ಗೋವಾದಲ್ಲಿ ಮತದಾನದ ದಿನದಂದು ಕರ್ನಾಟಕದಲ್ಲಿ ರಜೆ ಘೋಷಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ರಾಜ್ಯದಲ್ಲಿ ಒಟ್ಟು ₹375.60 ಕೋಟಿ ಮೌಲ್ಯದ ನಗದು, ವಸ್ತುಗಳ ವಶ