ನೋಯ್ಡಾ/ನವದೆಹಲಿ: ಹೊಟ್ಟೆ ನೋವು ಎಂದು ನೋಯ್ಡಾ ಸೆಕ್ಟರ್ 30ರ ಜಿಲ್ಲಾಸ್ಪತ್ರೆಗೆ ಬಂದಿದ್ದ ಬಾಲಕಿಯೊಬ್ಬಳು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿರುವ ಸುದ್ದಿ ಆಸ್ಪತ್ರೆಯಲ್ಲಿ ಸಂಚಲನ ಮೂಡಿಸಿದೆ. ಮೇ. 30ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಬಗ್ಗೆ ಜಿಲ್ಲಾ ಆಸ್ಪತ್ರೆಯ ಸಿಎಂಎಸ್ ವೈದ್ಯೆ ವಿನೀತಾ ಅಗರ್ವಾಲ್ ಮಾತನಾಡಿ, ಮೇ 30ರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಹೊಟ್ಟೆ ನೋವಿನ ಕಾರಣ ಬಾಲಕಿಯೊಬ್ಬಳು ಆಸ್ಪತ್ರೆಗೆ ಬಂದಿದ್ದಳು. ಪರೀಕ್ಷೆಗೋಸ್ಕರ ಸ್ತ್ರೀರೋಗ ತಜ್ಞರ ಬಳಿ ಕಳುಹಿಸಲಾಗಿತ್ತು. ಈ ವೇಳೆ ನೋವು ಹೆಚ್ಚಾಗಿರುವ ಕಾರಣ ಶೌಚಾಲಯಕ್ಕೆ ತೆರಳಿದ್ದು, ಅಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ವೇಳೆ, ಎಲ್ಲವನ್ನೂ ಮರೆಮಾಚಲು ಪ್ರಯತ್ನಿಸಿದ್ದಾಳೆ. ಆದರೆ, ಮಗುವಿನ ಅಳುವ ಶಬ್ದ ಕೇಳಿ, ಒಪಿಡಿ ವಾರ್ಡ್ನಲ್ಲಿದ್ದ ಮಹಿಳಾ ಭದ್ರತಾ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತೆಯರು ಶೌಚಾಲಯಕ್ಕೆ ತೆರಳಿ, ತಾಯಿ-ಮಗುವನ್ನ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ.
ಇಬ್ಬರಿಗೂ ಚಿಕಿತ್ಸೆ ನೀಡಲಾಗಿದ್ದು, ಸುಧಾರಿಸಿಕೊಂಡ ಬಳಿಕ ಆಸ್ಪತ್ರೆಯಿಂದ ತೆರಳಿದ್ದಾರೆ. ತಮ್ಮ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ ಎಂದಿದ್ದಾರೆ. ಜೊತೆಗೆ ಬಾಲಕಿ ಆಸ್ಪತ್ರೆಯಲ್ಲಿ ತನ್ನ ಹೆಸರು ದಾಖಿಸಿಕೊಳ್ಳಲು ಹಿಂದೇಟು ಹಾಕಿದ್ದಾಳೆಂದು ತಿಳಿಸಿದ್ದಾರೆ. ವಿಚಾರಣೆ ವೇಳೆ ಬಾಲಕಿ ನಿಖರವಾದ ವಿಳಾಸದ ಮಾಹಿತಿ ನೀಡಲು ನಿರಾಕರಿಸಿದ್ದು, ತದನಂತರ ಆಧಾರ್ ಕಾರ್ಡ್ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೆಕ್ಟರ್ 20ರ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಲಾಗಿದೆ ಎಂದಿದ್ದಾರೆ. ಇದರ ಬಗ್ಗೆ ಪೊಲೀಸ್ ಠಾಣೆ ಅಧಿಕಾರಿ ಮನೋಜ್ ಕುಮಾರ್ ಅವರಿಗೆ ಪ್ರಶ್ನಿಸಿದ್ದು, ಆ ರೀತಿಯ ಯಾವುದೇ ಪ್ರಕರಣ ನಮ್ಮಲ್ಲಿ ದಾಖಲಾಗಿಲ್ಲ ಎಂದಿದ್ದಾರೆ.