ಬರಾಬಂಕಿ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿವೋರ್ವಳ ಮೇಲೆ ನಾಲ್ವರು ಕಾಮುಕರು ಅತ್ಯಾಚಾರವೆಸಗಿದ್ದಾರೆ.
ಉತ್ತರ ಪ್ರದೇಶದ ಜಡೀಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿನಿ ಶಾಲೆಗೆ ತೆರಳುತ್ತಿದ್ದ ವೇಳೆ ನಾಲ್ವರು ಕಾಮುಕರು ಆಕೆಯ ಅಪಹರಣ ಮಾಡಿದ್ದು, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಈ ವಿಚಾರವನ್ನು ವಿದ್ಯಾರ್ಥಿನಿ ತಿಳಿಸಿದ್ದಾಳೆ. ಜತೆಗೆ ಕುಟುಂಬಸ್ಥರಿಗೆ ಇದರ ಬಗ್ಗೆ ಮಾಹಿತಿ ನೀಡಿದ್ದಾಳೆ. ಇದಾದ ಬಳಿಕ ಪೋಷಕರೊಂದಿಗೆ ತೆರಳಿ ದೂರು ದಾಖಲಿಸಿದ್ದಾಳೆ.
ಯುವತಿಯ ತಂದೆ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇರಾದೆ ಇಟ್ಟುಕೊಂಡಿದ್ದರು. ಆದರೆ ಸ್ಪರ್ಧೆ ಮಾಡದಂತೆ ಅವರ ಮೇಲೆ ಒತ್ತಡ ಹೇರುತ್ತಿದ್ದರು. ಇದಕ್ಕೆ ಒಪ್ಪದಿದ್ದಾಗ ಹಣದ ಆಮಿಷ ಸಹ ನೀಡಿದ್ದಾಗಿ ಅವರು ಪೊಲೀಸ್ ಠಾಣೆಯಲ್ಲಿ ಹೇಳಿದ್ದಾರೆ. ಈ ಪ್ರಸ್ತಾಪ ತಿರಸ್ಕರಿಸುತ್ತಿದ್ದಂತೆ ಶಾಲೆಗೆ ತೆರಳುತ್ತಿದ್ದ ವೇಳೆ ತನ್ನ 16 ವರ್ಷದ ಮಗಳ ಮೇಲೆ ಹಳ್ಳಿಯ ನಾಲ್ವರು ಅತ್ಯಾಚಾರವೆಸಗಿದ್ದಾರೆ ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ಆಕಾಸ್ ವರ್ಮಾ, ಲಾಲ್ಜಿ ವರ್ಮಾ, ಸಚಿನ್ ವರ್ಮಾ ಹಾಗೂ ಶಿವಂ ವರ್ಮಾ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಈಗಾಗಲೇ ವಿದ್ಯಾರ್ಥಿನಿಯನ್ನ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.