ನವದೆಹಲಿ: ವಾಹನ ಸವಾರರಿಗೆ ಸಿಹಿ ಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿದ್ದು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್ಟಿಒ) ನಡೆಸುವ ಪರೀಕ್ಷೆಗೊಳಗಾಗದೇ ಚಾಲನಾ ಪರವಾನಗಿ (ಡಿಎಲ್) ಪಡೆಯಬಹುದಾಗಿದೆ. ಆದರೆ ನೀವು ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರಗಳ ಪರೀಕ್ಷೆಯಲ್ಲಿ ಪಾಸ್ ಆಗಬೇಕಾಗಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹೊಸ ನಿಯಮಗಳನ್ನು ಪ್ರಕಟಿಸಿದ್ದು, ಜುಲೈ 1 ರಿಂದ ಜಾರಿಗೆ ಬರಲಿವೆ. ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರಗಳಲ್ಲಿ ದಾಖಲಾಗಿ, ಉತ್ತಮ ಗುಣಮಟ್ಟದ ಕೋರ್ಸ್ ಪಡೆದವರು ಅಲ್ಲಿ ನಡೆಸುವ ಡ್ರೈವಿಂಗ್ ಟೆಸ್ಟ್ನಲ್ಲಿ ಉತ್ತೀರ್ಣರಾಗಬೇಕು. ಇಂತವರಿಗೆ ಆರ್ಟಿಒ ನಡೆಸುವ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ. 1988ರ ಮೋಟಾರು ವಾಹನ ಕಾಯ್ದೆ ಅಡಿಈ ಕೇಂದ್ರಗಳಿಗೆ ಒಳ್ಳೆಯ ತರಬೇತಿ ನೀಡಲು ಬೇಕಾದ ಸೌಲಭ್ಯ ಒದಗಿಸಲಾಗುವುದು, ಚಾಲನಾ ಪರೀಕ್ಷಾ ಟ್ರ್ಯಾಕ್ ಅಳವಡಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್, ವಾಹನ ದಾಖಲೆ ಸಿಂಧುತ್ವ ಮತ್ತೆ ಮುಂದೂಡಿಕೆ
ನುರಿತ ಚಾಲಕರ ಕೊರತೆಯು ಭಾರತೀಯ ರಸ್ತೆ ವಲಯದಲ್ಲಿ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಚಾಲನಾ ಜ್ಞಾನದ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಹೀಗಾಗಿ ಒಳ್ಳೆಯ ಗುಣಮಟ್ಟದ ಚಾಲನಾ ತರಬೇತಿ ಸಿಗುವಂತೆ ಮಾಡುವುದು ನಮ್ಮ ಉದ್ದೇಶ ಎಂದು ಸಚಿವಾಲಯ ಹೇಳಿದೆ.
ಈ ಹಿಂದೆ, ಕೋವಿಡ್ -19 ಸಾಂಕ್ರಾಮಿಕದ ದೃಷ್ಟಿಯಿಂದ ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ ಮತ್ತು ಮೋಟಾರು ವಾಹನ ದಾಖಲೆಗಳ ಮಾನ್ಯತೆಯನ್ನು 2021ರ ಜೂನ್ 30ರವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿತ್ತು.