ಕಠ್ಮಂಡು, ನೇಪಾಳ: ಪುಷ್ಪಕಮಲ್ ದಹಾಲ್ ಪ್ರಚಂಡ ನೇತೃತ್ವದ ನೇಪಾಳ ಕಮ್ಯುನಿಸ್ಟ್ ಪಾರ್ಟಿ (ಎನ್ಸಿಪಿ) ಕರೆ ನೀಡಿದ್ದ ಮುಷ್ಕರವು ನೇಪಾಳದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಜನಜೀವನದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗಿದೆ.
ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಬ್ದವಾಗಿದ್ದು, ಶಾಲೆಗಳು ಮುಚ್ಚಲ್ಪಟ್ಟಿದ್ದು, ನಗರಗಳಲ್ಲಿ ಕೆಲವೇ ಕೆಲವು ಅಂಗಡಿಗಳು ಮಾತ್ರ ತೆರೆದಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರವೂ ಕೂಡಾ ಬಿಗಿ ಭದ್ರತೆ ಕೈಗೊಂಡಿತ್ತು.
ಭದ್ರತೆ ಹೆಚ್ಚಿಸಿರುವುದು ಮಾತ್ರವಲ್ಲದೇ ಮುಷ್ಕರವನ್ನು ಧಿಕ್ಕರಿಸಲು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ ಎಂದು ನೇಪಾಳ ಪೊಲೀಸರು ಹೇಳಿದ್ದು, ಹಿರಿಯ ನಾಯಕಿ ಅಷ್ಟ ಲಕ್ಷ್ಮಿ ಶಾಕ್ಯ ಸೇರಿದಂತೆ ಸುಮಾರು 75 ಮಂದಿಯನ್ನು ದೇಶದ ವಿವಿಧೆಡೆ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಕೀಲೆ ಮೀರಾ ರಾಘವೇಂದ್ರ ವಿರುದ್ಧ ದೂರು ದಾಖಲಿಸಿದ ಭಗವಾನ್
ಸರ್ಕಾರ ಪತನವಾದ ನಂತರ ದಿನಗಳಿಂದಲೂ ಪ್ರಚಂಡ ನೇತೃತ್ವದಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದವು. ಇಂದು ಮುಷ್ಕರಕ್ಕೆ ಕರೆ ನೀಡಿದ್ದು, ಪ್ರಮುಖ ನಗರಗಳು ಬಹುತೇಕ ಸ್ಥಬ್ಧವಾಗಿದ್ದವು.
ನೇಪಾಳ ಪ್ರಧಾನಿ ಕೆ.ಪಿ.ಶರ್ಮ ಓಲಿ ಅವರ ನಿರಂಕುಶತ್ವ ಮತ್ತು ಅರಾಜಕತೆಯ ವಿರುದ್ಧ ಈ ಮುಷ್ಕರವಾಗಿದ್ದು, ದೇಶಾದ್ಯಂತ ಶಾಂತಿಯುತವಾಗಿ ನಡೆದಿದೆ ಎಂದು ಎನ್ಸಿಪಿ ವಕ್ತಾರ ನಾರಾಯಣ್ ಕಾಜಿ ಶ್ರೇಷ್ಠ ಹೇಳಿದ್ದಾರೆ.