ನವದೆಹಲಿ: ಭೂ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಅವರು ನಿವೃತ್ತಿ ಆಗಲಿದ್ದಾರೆ. ಅವರ ಸ್ಥಾನಕ್ಕೆ ಜನರಲ್ ಮನೋಜ್ ಪಾಂಡೆ ಅವರು ನೇಮಕವಾಗಿದ್ದು, ಇಂದು ಅವರು 29 ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಜನರಲ್ ಪಾಂಡೆ, ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ನ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಫೆಬ್ರವರಿ 1 ರಂದು ಸೇನೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಪಾಂಡೆ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ವಲಯಗಳಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ರಕ್ಷಣೆ ಮಾಡುವ ಜವಾಬ್ದಾರಿ ಹೊಂದಿದ್ದ ಪೂರ್ವ ಸೇನಾ ಕಮಾಂಡ್‌ನ ಮುಖ್ಯಸ್ಥರಾಗಿದ್ದರು. ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಗಡಿ ತಂಟೆ ಸೇರಿದಂತೆ ಅಸಂಖ್ಯಾತ ಭದ್ರತಾ ಸವಾಲುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಜನರಲ್ ಪಾಂಡೆ ಅವರು ಸೇನೆಯ ನೂತನ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಭಾರತದ ಮೊದಲ ರಕ್ಷಣಾ ಸಿಬ್ಬಂದಿ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರಿಂದ ತೆರವಾದ ಸ್ಥಾನ ಇನ್ನೂ ಖಾಲಿ ಇದೆ. ಆ ಸ್ಥಾನಕ್ಕೆ ಸರ್ಕಾರ ಇನ್ನೂ ಯಾರನ್ನೂ ನೇಮಕ ಮಾಡಿಲ್ಲ.
ಏನೆಲ್ಲ ವಿಶೇಷ ಅನುಭ ಗಳಿಸಿದ್ದಾರೆ? 39 ವರ್ಷಗಳ ಕಾಲ ಮಿಲಿಟರಿ ವೃತ್ತಿಜೀವನದಲ್ಲಿ, ಜನರಲ್ ಪಾಂಡೆ ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಸಾಂಪ್ರದಾಯಿಕ ಮತ್ತು ಪ್ರತಿ-ಬಂಡಾಯ ಕಾರ್ಯಾಚರಣೆಗಳಲ್ಲಿ ಪ್ರತಿಷ್ಠಿತ ಕಮಾಂಡ್ ಮತ್ತು ಸಿಬ್ಬಂದಿ ನಿಯೋಜನೆಗಳನ್ನು ಹೊಂದಿದ್ದರು.
ಆಪರೇಷನ್ ಪರಾಕ್ರಮ್: ಮನೋಜ್ ಪಾಂಡೆ ಅವರು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಲ್ಲನ್‌ವಾಲಾ ಸೆಕ್ಟರ್‌ನಲ್ಲಿ ಆಪರೇಷನ್ ಪರಾಕ್ರಮ್ ಸಮಯದಲ್ಲಿ ಇಂಜಿನಿಯರ್ ರೆಜಿಮೆಂಟ್ ಆಗಿ ಕಾರ್ಯನಿರ್ವಹಿಸಿದರು. ಸಂಸತ್ತಿನ ಮೇಲೆ ಡಿಸೆಂಬರ್ 2001ರ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಅಂಚಿಗೆ ಹೋದಾಗ ಆಪರೇಷನ್ ಪರಾಕ್ರಮ್ ನಲ್ಲಿ ಕಾರ್ಯ ನಿರ್ವಹಿಸಿದ್ದರು.
ವಿವಿಧ ಜವಾಬ್ದಾರಿ ನಿರ್ವಹಣೆ : ಅವರು ವೆಸ್ಟರ್ನ್ ಥಿಯೇಟರ್‌ನಲ್ಲಿ ಇಂಜಿನಿಯರ್ ಬ್ರಿಗೇಡ್, ಗಡಿ ನಿಯಂತ್ರಣ ರೇಖೆಯ(LOC) ಉದ್ದಕ್ಕೂ ಪದಾತಿದಳ, ಲಡಾಖ್ ಸೆಕ್ಟರ್‌ನಲ್ಲಿ ಪರ್ವತ ವಿಭಾಗ ಮತ್ತು ಈಶಾನ್ಯದಲ್ಲಿ ಕಾರ್ಪ್ಸ್ ಅನ್ನು ಕಮಾಂಡ್ ಮಾಡಿ ಅನುಭವ ಹೊಂದಿದ್ದಾರೆ. ಲೆಫ್ಟಿನೆಂಟ್ ಜನರಲ್ ಪಾಂಡೆ ಅವರು ಸೇನೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಪೂರ್ವ ಸೇನಾ ಕಮಾಂಡರ್ ಆಗಿಯೂ ಸೇವೆ ಸಲ್ಲಿಸಿದ್ದರು. ಜೂನ್ 2020 ರಿಂದ ಮೇ 2021 ರವರೆಗೆ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ (CINCAN)ನ ಕಮಾಂಡರ್-ಇನ್-ಚೀಫ್ ಆಗಿದ್ದರು. ಜನರಲ್ ನರವಾಣೆ ನಿವೃತ್ತರಾದ ನಂತರ ಮನೋಜ್ ಪಾಂಡೆ ಅತ್ಯಂತ ಹಿರಿಯ ಅಧಿಕಾರಿಯಾಗಿದ್ದಾರೆ.
ಜನರಲ್ ಪಾಂಡೆ ಕುಟುಂಬ: ಮನೋಜ್ ಪಾಂಡೆ ಅವರ ತಂದೆ ಸಿ ಜಿ ಪಾಂಡೆ. ಇವರು ಕನ್ಸಲ್ಟಿಂಗ್ ಸೈಕೋಥೆರಪಿಸ್ಟ್ ಆಗಿದ್ದರು ಮತ್ತು ನಾಗ್ಪುರ ವಿಶ್ವವಿದ್ಯಾನಿಲಯದ ವಿಭಾಗದ ಮುಖ್ಯಸ್ಥರಾಗಿ (ಮನೋವಿಜ್ಞಾನ) ನಿವೃತ್ತರಾಗಿದ್ದಾರೆ. ತಾಯಿ ದಿವಂಗತ ಪ್ರೇಮಾ ಅವರು ಆಲ್ ಇಂಡಿಯಾ ರೇಡಿಯೊದಲ್ಲಿ ಜನಪ್ರಿಯ ಉದ್ಘೋಷಕಿ ಮತ್ತು ಹೋಸ್ಟ್ ಆಗಿದ್ದರು.
ಇದನ್ನು ಓದಿ :ನಮ್ಮ ಕರ್ತವ್ಯ ನಿರ್ವಹಿಸುವಾಗ 'ಲಕ್ಷ್ಮಣರೇಖೆ' ಬಗ್ಗೆ ಜಾಗರೂಕರಾಗಿರಬೇಕು: ಸಿಜೆಐ ಎನ್ವಿ ರಮಣ