ಖಗಾರಿಯಾ(ಬಿಹಾರ): ಬಿಹಾರದ ಖ್ಯಾತ ಜಾನಪದ ಕಲೆಯಾದ ಲೌಂಡಾ ನೃತ್ಯ ಮಾಡುತ್ತಿದ್ದ ಯುವಕರಿಬ್ಬರು ಪರಸ್ಪರ ಪ್ರೀತಿಯಲ್ಲಿ ಬಿದ್ದು ಸಲಿಂಗ ವಿವಾಹ ಆಗಿದ್ದಾರೆ. ವಿಷಯ ತಿಳಿದ ಪೋಷಕರು ಇದನ್ನು ಆಕ್ಷೇಪಿಸಿ ಇಬ್ಬರನ್ನೂ ದೂರ ಮಾಡಿದ ಘಟನೆ ನಡೆದಿದೆ.
ಮದುವೆ, ದಿಬ್ಬಣ ಮತ್ತಿತರ ಸಭೆ ಸಮಾರಂಭಗಳಲ್ಲಿ ಈ ಇಬ್ಬರು ಯುವಕರು ಜಾನಪದ ನೃತ್ಯವಾದ 'ಲೌಂಡಾ'ಕ್ಕೆ ಒಟ್ಟಾಗಿ ಹೆಜ್ಜೆ ಹಾಕುವುದರಲ್ಲಿ ನಿಸ್ಸೀಮರಾಗಿದ್ದರು. ಇವರು ಹಲವೆಡೆ ಕಾರ್ಯಕ್ರಮಗಳನ್ನೂ ನೀಡಿದ್ದಾರೆ. ಈ ವೇಳೆ, ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ. 10 ದಿನಗಳ ಹಿಂದೆ ಒಬ್ಬ ವಧುವಿನಂತೆ ಸಿಂಗರಿಸಿಕೊಂಡು ಇನ್ನೊಬ್ಬನ ಮನೆಗೆ ಹೋಗಿ ಮದುವೆಯಾಗುವಂತೆ ಕೇಳಿದ್ದಾನೆ.
ಬಳಿಕ ಅವರು ಕೂಡ ಇದಕ್ಕೊಪ್ಪಿ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ. ಇದು ಉಭಯ ಕುಟುಂಬಗಳ ಗಮನಕ್ಕೆ ಬಂದಿದ್ದು, ಯುವಕರ ಸಲಿಂಗ ಮದುವೆ ಆಕ್ಷೇಪಿಸಿದ್ದಾರೆ. ಅಲ್ಲದೇ ಇಬ್ಬರನ್ನೂ ಪ್ರತ್ಯೇಕಿಸಿದ ಕುಟುಂಬಸ್ಥರು ತಮ್ಮ ಮನೆಗಳಿಗೆ ಕರೆದೊಯ್ದಿದ್ದಾರೆ.
"ಇಬ್ಬರು ಒಳ್ಳೆಯ ಗೆಳೆಯರು. ಇವರು ಸಲಿಂಗ ಮದುವೆಯಾಗಿಲ್ಲ. ಜನರು ಸುಖಾಸುಮ್ಮನೇ ಗಾಳಿ ಸುದ್ದಿ ಹಬ್ಬಿಸಿದ್ದಾರೆ. ಇಬ್ಬರೂ ಪ್ರತ್ಯೇಕವಾಗಿದ್ದಾರೆ" ಎಂದು ಅವರ ಕುಟುಂಬಗಳು ತಿಳಿಸಿವೆ. ಅಂದಹಾಗೆ ಭಾರತದಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ಇಲ್ಲ. ಸುಪ್ರೀಂಕೋರ್ಟ್ ಕೂಡ ಈ ಬಗ್ಗೆ ತೀರ್ಪು ನೀಡಿದೆ.
ಓದಿ: ಜ್ಞಾನವಾಪಿ ಮಸೀದಿ ಅರ್ಜಿದಾರ ಮಹಿಳೆ ಪತಿಗೆ ಪಾಕಿಸ್ತಾನದಿಂದ ಶಿರಚ್ಚೇದ ಬೆದರಿಕೆ