ನವದೆಹಲಿ: ದಕ್ಷಿಣ ದೆಹಲಿಯ ಮಾಲ್ವಿಯಾ ನಗರದ ಜನಪ್ರಿಯ ಉಪಹಾರ ಗೃಹ ‘ಬಾಬಾ ಕಾ ಢಾಬಾ’ ಮಾಲೀಕ ಕಾಂತಾ ಪ್ರಸಾದ್ ಅವರು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹರಿಬಿಟ್ಟಿದ್ದ ಗೌರವ್ ವಾಸನ್ ವಿರುದ್ಧ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರವ್ ವಾಸನ್ಗೆ ಕ್ಲೀನ್ ಚೀಟ್ ನೀಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಕಾಲ ಗೌರವ್ ವಾಸನ್ರನ್ನು ಪೊಲೀಸರು ವಿಚಾರಣೆ ನಡೆಸಿದರು. ಈ ವೇಳೆ, ವಾಸನ್ ಸಾಕ್ಷಿ ಸಮೇತ ಹಣದ ಬಗ್ಗೆ ಮಾಹಿತಿ ನೀಡಿದ್ದಾರೆ.
ಇಲ್ಲಿಯವರೆಗೆ ರೂ. 3,78,000 ಹಣವನ್ನು ಸಂಗ್ರಹಿಸಿದ್ದೇವೆ. ಈ ಎಲ್ಲ ಹಣವನ್ನು ‘ಬಾಬಾ ಕಾ ಢಾಬಾ’ ಮಾಲೀಕ ಕಾಂತಾ ಪ್ರಸಾದ್ ಅವರಿಗೆ ವರ್ಗಾಯಿಸಲಾಗಿದೆ. ಚೆಕ್ ಮೂಲಕ 2,33,67 ರೂ. ಮತ್ತು ಪೇಟಿಎಂ ಮೂಲಕ ಉಳಿದ ಮೊತ್ತವನ್ನು ಅವರ ಖಾತೆಗೆ ಜಮಾಯಿಸಲಾಗಿದೆ ಎಂದು ವಾಸನ್ ಈಟಿವಿ ಭಾರತಕ್ಕೆ ತಿಳಿಸಿದರು.
ದೇಣಿಗೆಯನ್ನು ಸ್ವೀಕರಿಸಲು ತನ್ನ ಮತ್ತು ಅವರ ಕುಟುಂಬದ ಖಾತೆಯ ವಿವರಗಳನ್ನು ಮಾತ್ರ ನೀಡಿದ್ದೇನೆ ಎಂಬ ಪ್ರಸಾದ್ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ವಾಸನ್, ಕಾಂತಾ ಪ್ರಸಾದ್ ಬಳಿ ಪೇಟಿಎಂ ಆ್ಯಪ್ ಹೊಂದಿರುವಂತಹ ಮೊಬೈಲ್ ಇರಲಿಲ್ಲ. ಹೀಗಾಗಿ ನಾನು ದೇಣಿಗೆ ಹಣವನ್ನು ಸಂಗ್ರಹಿಸಲು ನನ್ನ ಪತ್ನಿ ಖಾತೆಯನ್ನು ಬಳಸಿದ್ದೇನೆ ಎಂದು ಹೇಳಿದರು.
ಬಾಬಾ ಕಾ ಢಾಬಾ ಮಾಲೀಕ ಪ್ರಸಾದ್ ಪೊಲೀಸರಿಗೆ ನೀಡಿದ ದೂರಿನಲ್ಲಿ, ವಾಸನ್ ತಮ್ಮ ವಿಡಿಯೋ ಚಿತ್ರೀಕರಿಸಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ವೇಳೆ, ಉಪಹಾರ ಗೃಹ ಮಾಲೀಕರಿಗೆ ಹಣವನ್ನು ದೇಣಿಗೆ ನೀಡುವಂತೆ ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ, ವಾಸನ್ ತನ್ನ ಮತ್ತು ಅವನ ಕುಟುಂಬ/ಸ್ನೇಹಿತರ ಬ್ಯಾಂಕ್ ವಿವರಗಳು ಮತ್ತು ಮೊಬೈಲ್ ಸಂಖ್ಯೆಗಳನ್ನು ಮಾತ್ರ ದಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನನಗೆ ಯಾವುದೇ ಮಾಹಿತಿ ನೀಡದೇ ಅಪಾರ ಪ್ರಮಾಣದ ದೇಣಿಗೆ ಸಂಗ್ರಹಿಸಿದಲ್ಲದೇ ಆ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.
ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಸಾದ್ ದೂರು ದಾಖಲಿಸಿದ್ದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಅತುಲ್ ಕುಮಾರ್ ಠಾಕೂರ್ ಈ ಬಗ್ಗೆ ತಿಳಿಸಿದ್ದರು. ಈ ಪ್ರಕರಣದ ಕುರಿತು ಈಗ ವಾಸನ್ರಿಗೆ ಕ್ಲೀನ್ ಚೀಟ್ ನೀಡಲಾಗಿದೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ದೆಹಲಿಯ ‘ಬಾಬಾ ಕಾ ಢಾಬಾ’ ಸುದ್ದಿಯಾಗಿತ್ತು. ಲಾಕ್ಡೌನ್ ಸಮಯದಲ್ಲಿ ‘ಬಾಬಾ ಕಾ ಢಾಬಾ’ ಎಂಬ ಪುಟ್ಟ ಬೀದಿ ಬದಿಯ ಹೋಟೆಲ್ ಮಾಲೀಕ ಕಾಂತಾ ಪ್ರಸಾದ್ ಅನುಭವಿಸಿದ ಕಷ್ಟಗಳ ಬಗ್ಗೆ ಅಳಲು ತೋಡಿಕೊಂಡಿದ್ದ ವಿಡಿಯೋ ನೆಟ್ಟಿಗರ ಮನ ಗೆದ್ದಿತ್ತು.