ಅನಕಾಪಲ್ಲಿ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಅಚ್ಯುತಪುರಂನ ಎಸ್ಇಜೆಡ್ನಲ್ಲಿರುವ ಕಾರ್ಖಾನೆಯೊಂದರಲ್ಲಿ ಶುಕ್ರವಾರ ಮಧ್ಯಾಹ್ನ 12:30ಕ್ಕೆ ಅಮೋನಿಯಂ ಅನಿಲ ಸೋರಿಕೆಯಾಗಿದೆ. ಪರಿಣಾಮ ಹಲವು ಮಹಿಳಾ ಕಾರ್ಮಿಕರು ಅಸ್ವಸ್ಥಗೊಂಡಿದ್ದು, ಅವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾರ್ಖಾನೆಯಲ್ಲಿ ಇದ್ದಕ್ಕಿಂದ್ದಂತೆ ವಿಷಾನಿಲ ಸೋರಿಕೆಯಾಗಿದ್ದು, ಕಾರ್ಮಿಕರಿಗೆ ತಲೆ ತಿರುಗುವಿಕೆ, ವಾಂತಿ ಕಂಡು ಬಂದಿದ್ದು ಸುಮಾರು 30ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. ವಿಷಾನಿಲ ಹರಡಿದ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಅಧಿಕಾರಿಗಳು ತಕ್ಷಣ 20 ಆ್ಯಂಬುಲೆನ್ಸ್‌ಗಳನ್ನು ಕರೆಯಿಸಿ ಅಸ್ವಸ್ಥರಾದ ಮಹಿಳಾ ಕಾರ್ಮಿಕರನ್ನು ಬ್ರಾಂಡಿಕ್ಸ್ ಸೆಜ್ ಆಸ್ಪತ್ರೆಗೆ ರವಾನಿಸಸಿದ್ದಾರೆ. ಇನ್ನು ಕೆಲವರನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಿದ್ದಾರೆ.
ಅಮೋನಿಯಾ ಸೋರಿಕೆಯಾಗಿರುವ ಬಗ್ಗೆ ಜಿಲ್ಲಾಧಿಕಾರಿ ರವಿ ಸುಭಾಷ್ ಅವರು ಹಿರಿಯ ವೈದ್ಯಾಧಿಕಾರಿಗಳಿಗೆ ಗಮನ ನೀಡುವಂತೆ ಮಾಹಿತಿ ರವಾನಿಸಿದ್ದಾರೆ. ಜಿಲ್ಲಾ ವೈದ್ಯಕೀಯ ಆರೋಗ್ಯಾಧಿಕಾರಿ ಹೇಮಂತ್ ಕುಮಾರ್ ಅವರು ಸ್ಥಳಕ್ಕೆ ತೆರಳಿ ವೈದ್ಯಕೀಯ ಸೇವೆಗಳ ಜೊತೆಗೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಐಟಿ ಮತ್ತು ಕೈಗಾರಿಕಾ ಸಚಿವ ಜಿ ಅಮರನಾಥ್ ಅವರು ಸಹ ಸಂತ್ರಸ್ತರಿಗೆ ಪ್ರಥಮ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಮಾಹಿತಿ ಕೊಟ್ಟಿದ್ದಾರೆ. ಪ್ರಥಮಿಕ ಮಾಹಿತಿ ಪ್ರಕಾರ ಪೋರಸ್ ಪ್ರಯೋಗಾಲಯದಿಂದ ಈ ಅನಿಲ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.