ಹಲ್ದ್ವಾನಿ(ಉತ್ತರಾಖಂಡ): ತಂದೆ ಶಾಸಕ ಅಥವಾ ಸಚಿವನಾದ್ರೆ ಸಾಕು ಅವರ ಮಕ್ಕಳು ಕಾರುಬಾರು ಕೇಳುವ ಹಾಗಿಲ್ಲ. ಐಷಾರಾಮಿ ಕಾರು, ಬೈಕ್ಗಳಲ್ಲಿ ಓಡಾಡುವುದು, ದರ್ಪ-ದೌಲತ್ತು ಪ್ರದರ್ಶನವೂ ಕಮ್ಮಿ ಇರಲ್ಲ. ಆದರೆ, ಇದೀಗ ನಾವು ಹೇಳುತ್ತಿರುವ ಕಥೆ ಮಾತ್ರ ಇದಕ್ಕೆ ತದ್ವಿರುದ್ಧ.
ಉತ್ತರಾಖಂಡದಲ್ಲಿ ಕಳೆದ ಕೆಲ ದಿನಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಫಕೀರ್ ರಾಮ್ ತಮ್ತಾ ಎಂಬವರು ಪಿಥೋರಗಢ್ ಜಿಲ್ಲೆಯ ಗಂಗೊಳ್ಳಿಹಾತ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದಿನಿಂದಲೂ ಸರಳತೆಗೆ ಹೆಸರುವಾಸಿಯಾಗಿರುವ ಇವರು, ಮೊದಲು ಬಡಗಿ ಕೆಲಸ ಮಾಡುತ್ತಿದ್ದರು. ಇದೀಗ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದು, ಇವರ ಇಬ್ಬರು ಮಕ್ಕಳು ಮಾತ್ರ ತಂದೆಯ ರಾಜಕೀಯ ಸಾಧನೆಯನ್ನು ಸ್ವಹಿತ ಅಥವಾ ಸ್ವಾರ್ಥಕ್ಕಾಗಿ ಯಾವುದೇ ರೀತಿಯಲ್ಲೂ ದುರುಪಯೋಗ ಮಾಡಿಕೊಂಡಿಲ್ಲ.
ಶಾಸಕ ಫಕೀರ್ ರಾಮ್ ತಮ್ತಾ ಅವರ ಹಿರಿಮಗ ಜಗದೀಶ್ ತಮ್ತಾ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಉತ್ತರಾಖಂಡದ ದಮುದುವಾನ್ ಚೌಪಾಲ್ನಲ್ಲಿ ಅಂಗಡಿ ಇಟ್ಟುಕೊಂಡಿದ್ದಾರೆ. ಇವರ ಕಿರಿಯ ಮಗ ಬಡಗಿಯಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.
ಈಟಿವಿ ಭಾರತ್ ಜೊತೆ ಮಾತನಾಡಿರುವ ಶಾಸಕರ ಹಿರಿಯ ಮಗ ಜಗದೀಶ್, 'ನಮ್ಮ ತಂದೆ ಶಾಸಕರಾಗಿರುವುದು ಖುಷಿ ನೀಡಿದೆ. ಅವರ ಪ್ರಾಮಾಣಿಕತೆ ಮೆಚ್ಚಿ ಮತದಾರರು ಅವರನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದಾರೆ. ನಾನು ನನ್ನ ಪಂಕ್ಚರ್ ಅಂಗಡಿ ಕೆಲಸ ಮುಂದುವರೆಸಿಕೊಂಡು ಹೋಗುವೆ. ಕಳೆದ 12 ವರ್ಷಗಳಿಂದಲೂ ಇದೇ ಕೆಲಸ ಮಾಡುತ್ತಿದ್ದೇನೆ' ಎಂದರು.
ಕಿರಿಯ ಪುತ್ರ ಬಿರೇಂದ್ರ ರಾಮ್ ಪ್ರತಿಕ್ರಿಯಿಸಿ, 'ನನ್ನ ತಂದೆ ಈ ಮೊದಲು ಕಾರ್ಪೆಂಟರ್ ಆಗಿದ್ದರು. ಅವರ ಕೆಲಸಗಳನ್ನು ನಾನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ' ಎಂದು ಹೇಳಿದರು.
70 ವಿಧಾನಸಭಾ ಕ್ಷೇತ್ರಗಳ ಉತ್ತರಾಖಂಡ ವಿಧಾನಸಭೆ ಚುನಾವಣೆಗೆ ನಡೆದ ಮತದಾನದ ಫಲಿತಾಂಶ ಮಾರ್ಚ್ 10ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ 47 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಈ ಮುಖೇನ ಎರಡನೇ ಅವಧಿಗೂ ಅಧಿಕಾರ ಉಳಿಸಿಕೊಂಡಿದೆ.