ಬೇಗುಸರಾಯ್(ಬಿಹಾರ್): ಜಿಲ್ಲೆಯಲ್ಲಿ ಸಂಭವಿಸಲಿದ್ದ ಭಾರಿ ರೈಲು ಅಪಘಾತವೊಂದು ಗ್ಯಾಂಗ್ಮನ್ ಸಮಯಪ್ರಜ್ಞೆಯಿಂದ ತಪ್ಪಿದೆ. ರೈಲು ಹಳಿ ಬೇರ್ಪಟ್ಟಿರುವುದನ್ನು ಗ್ಯಾಂಗ್ಮನ್ ಗಮನಿಸಿ ಎದುರಿನಿಂದ ಬರುತ್ತಿದ್ದ ಸೂಪರ್‌ಫಾಸ್ಟ್ ರೈಲಿಗೆ ಕೆಂಪು ಧ್ವಜ ತೋರಿಸುವ ಮೂಲಕ ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ವೈಶಾಲಿ ಸೂಪರ್‌ಫಾಸ್ಟ್ ರೈಲು ಈ ಹಳಿಯ ಮೂಲಕ ಹಾದು ಹೋಗುತ್ತಿತ್ತು. ಬರೌನಿ-ಕತಿಹಾರ್ ರೈಲ್ವೆ ವಿಭಾಗದ ಲಖೋ ಮತ್ತು ದನೌಲಿ ಫುಲ್ವಾರಿಯಾ ನಿಲ್ದಾಣದ ಮಧ್ಯ ಟ್ರ್ಯಾಕ್ ಕಂಬ ಸಂಖ್ಯೆ 155 ರ ಬಳಿ ಸುಮಾರು 10 ಇಂಚುಗಳಷ್ಟು ಹಳಿ ಬೇರ್ಪಟ್ಟಿತ್ತು. ಇದನ್ನು ಗ್ಯಾಂಗ್ಮನ್ ಗಮನಿಸಿದ್ದಾರೆ. ಇದೇ ವೇಳೆ ವೈಶಾಲಿ ಸೂಪರ್‌ಫಾಸ್ಟ್ ರೈಲು ಎದುರುಗಡೆಯಿಂದ ಬರುತ್ತಿತ್ತು. ಆಗ ಗ್ಯಾಂಗ್ಮನ್ ಕೆಂಪು ಬಾವುಟ ತೋರಿಸಿ ರೈಲನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಗ್ಯಾಂಗ್ಮನ್ ಸೂಚನೆ ಮೇರೆಗೆ ಲೋಕೊ ಪೈಲಟ್ ರೈಲನ್ನು ನಿಲ್ಲಿಸಿದ್ದಾರೆ.
ಇದಾದ ನಂತರ ರೈಲ್ವೆ ಹಳಿ ಬೇರ್ಪಟ್ಟಿರುವ ಬಗ್ಗೆ ಗ್ಯಾಂಗ್ಮನ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ದುರಸ್ತಿ ಕಾರ್ಯ ಆರಂಭಿಸಿದರು. ದುರಸ್ತಿ ಕಾರ್ಯದ ಬಳಿಕ ರೈಲು ಒಂದು ಗಂಟೆ ತಡವಾಗಿ ಸಂಚರಿಸಿತು.
ಓದಿ: ಹುಬ್ಬಳ್ಳಿ: ಚಲಿಸುತ್ತಿದ್ದ ರೈಲಿನಲ್ಲಿ ಆಂಧ್ರ ವ್ಯಕ್ತಿಯ ಬರ್ಬರ ಹತ್ಯೆ... ದುಷ್ಕರ್ಮಿಗಳು ಎಸ್ಕೇಪ್