ಪ್ರತಾಪ್‌ಗಢ(ಉತ್ತರಪ್ರದೇಶ): ಜಿಲ್ಲೆಯಲ್ಲಿ ಹೀನ ಕೃತ್ಯ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಸ್ನೇಹಿತನನ್ನು ನಂಬಿ ಆತನ ಹಿಂದೆ ತೆರಳಿದ್ದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಜಿಲ್ಲೆಯ ದೆಲ್ಹುಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗಜೆಡಾ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಸಂತ್ರಸ್ತೆ ಬಾಲಕಿಯ ಚಿಕ್ಕಮ್ಮಳ ಆರೋಪ: ನನ್ನ ಮಗಳ ಸ್ನೇಹಿತನಾದ ಶಿವಂ ಸರೋಜ್ ಆಕೆಯನ್ನು ಬೈಕ್ನಲ್ಲಿ ಕರೆದೊಯ್ದಿದ್ದಾನೆ. ಇದಕ್ಕೂ ಮೊದಲು ಕಾಡಿನಲ್ಲಿ ಇಬ್ಬರು ಹುಡುಗರು ಇವರ ಬರುವಿಕೆಗೆ ಕಾಯುತ್ತಾ ನಿಂತಿದ್ದರು. ಕಾಡಿನಲ್ಲಿ ನಿಂತಿದ್ದ ಇಬ್ಬರು ಹುಡುಗರ ಜೊತೆಗೂಡಿ ಶಿವಂ ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲ, ಈ ವೇಳೆ ಆರೋಪಿಗಳು ಘಟನೆಯ ವಿಡಿಯೋ ಮಾಡಿದ್ದು, ಈ ಸುದ್ದಿಯನ್ನು ಬಹಿರಂಗ ಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆಯ ಚಿಕ್ಕಮ್ಮ ಆರೋಪಿಸಿದ್ದಾರೆ.
ಘಟನೆಯ ಬಳಿಕ ಬಾಲಕಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ರಸ್ತೆಬದಿಯಲ್ಲಿ ಬಾಲಕಿಯನ್ನು ನೋಡಿದ ಗ್ರಾಮಸ್ಥರು ಘಟನೆಯ ಬಗ್ಗೆ ಪಿಆರ್‌ಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು 108 ಆಂಬ್ಯುಲೆನ್ಸ್‌ನಿಂದ ಮಹಿಳಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಶೇಷವೆಂದರೆ ಆಸ್ಪತ್ರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕೆಲ ಅಪರಿಚಿತ ಹುಡುಗರು ನಮ್ಮ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಇದೀಗ ಪೊಲೀಸರು ಮಗಳನ್ನು ಭೇಟಿಯಾಗಲು ಬಿಡುತ್ತಿಲ್ಲ. ನಮಗೆ ನ್ಯಾಯ ಸಿಗಬೇಕು ಎಂದು ಸಂತ್ರಸ್ತೆಯ ತಂದೆ ರೋದಿಸುತ್ತಿದ್ದಾರೆ. ಸಂಬಂಧಿಕರ ದೂರಿನ ಮೇರೆಗೆ ಶಿವಂ ಸೇರಿದಂತೆ ಮೂವರ ಮೇಲೆ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆದಷ್ಟು ಬೇಗ ಆರೋಪಿಯನ್ನು ಸೆರೆ ಹಿಡಿಯುವುದಾಗಿ ಸಿಒ ರಾಣಿಗಂಜ್ ವಿನಯ್ ಸಾಹ್ನಿ ತಿಳಿಸಿದ್ದಾರೆ.
ಓದಿ: ಗ್ಯಾಂಗ್ರೇಪ್ ಆರೋಪಿಗಳ ಮನೆಯನ್ನು ಜೆಸಿಬಿಯಿಂದ ಧ್ವಂಸಗೊಳಿಸಿದ ಜಿಲ್ಲಾಡಳಿತ