ಎನ್ಟಿಆರ್ : ಜಿಲ್ಲೆಯ ವಿಜಯವಾಡ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಂತ ಹೇಯ ಘಟನೆ ನಡೆದಿದೆ. 23 ವರ್ಷದ ಬುದ್ಧಿಮಾಂದ್ಯ ಯುವತಿ ಮೇಲೆ ಮೂವರು ಆರೋಪಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳು ಸುಮಾರು 30 ಗಂಟೆಗಳ ಕಾಲ ಆಕೆ ಜೊತೆ ಅತ್ಯಂತ ಕ್ರೂರವಾಗಿ ನಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಆಕೆಯ ತಂದೆ ಎದುರೇ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.
ಏನಿದು ಘಟನೆ? : ಅತ್ಯಂತ ಹೇಯ ಕೃತ್ಯ ನಗರದಲ್ಲಿ ನಡೆದಿದೆ. ಎನ್ಟಿಆರ್ ಜಿಲ್ಲೆಯ ಕಾಲೋನಿವೊಂದರಲ್ಲಿ 23 ವರ್ಷದ ಯುವತಿ ಬುದ್ಧಿಮಾಂದ್ಯದಿಂದ ಬಳಲುತ್ತಿದ್ದಾರೆ. ಈ ತಿಂಗಳ 19ರಂದು ಮನೆಯಲ್ಲಿ ಒಬ್ಬಳೇ ಇದ್ದಾಗ ಅದೇ ಪ್ರದೇಶದ 26 ವರ್ಷದ ದಾರಾ ಶ್ರೀಕಾಂತ್ ಎಂಬಾತ ಆಕೆಯನ್ನು ಮದುವೆಯಾಗುವುದಾಗಿ ಮತ್ತು ಕೆಲಸ ಕೊಡಿಸುವುದಾಗಿ ನಂಬಿಸಿದ್ದಾನೆ.
ಗುತ್ತಿಗೆ ನೌಕರನ ಕಿತಾಪತಿ : ಸರ್ಕಾರಿ ಆಸ್ಪತ್ರೆಯ ಕೀಟ ನಿಯಂತ್ರಣ ವಿಭಾಗದಲ್ಲಿ ಗುತ್ತಿಗೆ ನೌಕರನಾಗಿ ಶ್ರೀಕಾಂತ್ ಕೆಲಸ ಮಾಡುತ್ತಿದ್ದಾನೆ. ಕರ್ತವ್ಯದ ವೇಳೆ ಯುವತಿಯನ್ನು ತನ್ನೊಂದಿಗೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಪೆಸ್ಟ್ ಕಂಟ್ರೋಲ್ ಯೂನಿಟ್ಗೆ ನಿಯೋಜಿಸಲಾಗಿದ್ದ ಕೊಠಡಿಯಲ್ಲಿ ರಾತ್ರಿಯಿಡೀ ಆಕೆಯನ್ನು ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾನೆ.
ಆಸ್ಪತ್ರೆ ಆವರಣದಲ್ಲಿ ಅಲೆದಾಟ : ತನ್ನ ಕೆಲಸದ ಬಳಿಕ ಮರುದಿನ ಅಂದ್ರೆ ಏಪ್ರಿಲ್ 20ರಂದು ಬೆಳಗ್ಗೆ ಆಕೆಯನ್ನು ಆಸ್ಪತ್ರೆಯಲ್ಲೇ ಬಿಟ್ಟು ಮನೆಗೆ ತೆರಳಿದ್ದಾನೆ. ಪಾಪ ಆ ಯುವತಿ ತನ್ನ ಮನೆ ವಿಳಾಸ ಗೊತ್ತಾಗದೇ ಮತ್ತು ಯಾರನ್ನ ಸಂಪರ್ಕಿಸಬೇಕೆಂದು ತಿಳಿಯದೆ ಆಸ್ಪತ್ರೆ ಆವರಣದಲ್ಲಿ ಅಲೆದಾಡುತ್ತಿದ್ದಳು.
ಆಕೆಯ ಮೇಲೆ ಮತ್ತಿಬ್ಬರ ಕಣ್ಣು: ಆಸ್ಪತ್ರೆಯಲ್ಲಿ ಗುತ್ತಿಗೆ ಕಾರ್ಮಿಕನಾಗಿದ್ದ 23 ವರ್ಷ ವಯಸ್ಸಿನ ಚೆನ್ನ ಬಾಬುರಾವ್ ಮತ್ತು ಅವನ ಸ್ನೇಹಿತ 23 ವರ್ಷ ವಯಸ್ಸಿನ ಜೋರಂಗುಲ ಪವನ್ ಕಲ್ಯಾಣ್ ಆಸ್ಪತ್ರೆ ಆವರಣದಲ್ಲಿ ಯುವತಿ ಒಂಟಿಯಾಗಿ ಅಲೆದಾಡುತ್ತಿರುವುದನ್ನು ಗುರುತಿಸಿದ್ದಾರೆ. ಬಳಿಕ ಇಬ್ಬರು ಸೇರಿ ಆಕೆಯನ್ನು ಮತ್ತೊಂದು ಕೋಣೆಯಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾರೆ.
ಓದಿ: 50 ವರ್ಷದ ಕಾಮುಕನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ, ಹೆದರಿ ಆಸ್ಪತ್ರೆಗೆ ದಾಖಲಿಸಿದ!
ಪೋಷಕರ ಹುಡುಕಾಟ : ಏಪ್ರಿಲ್ 19ರ ರಾತ್ರಿ 8 ಗಂಟೆಯಿಂದ ಮಗಳು ನಾಪತ್ತೆಯಾದಾಗಿನಿಂದ ಸಂತ್ರಸ್ತೆಯ ಪೋಷಕರು ತಾವು ವಾಸಿಸುತ್ತಿದ್ದ ಕಾಲೋನಿ ಪರಿಸರದಲ್ಲಿ ಹುಡುಕಾಟ ನಡೆಸಿದ್ದಾರೆ. ಆದ್ರೂ ಸಹ ಮಗಳು ಪತ್ತೆಯಾಗಿಲ್ಲ. ಕತ್ತಲಾಗಿದ್ದರಿಂದ ಹೆದರಿ ಎಲ್ಲಾದ್ರೂ ಮಲಗಿರಬೇಕು. ಬೆಳಗ್ಗೆಯಾದ್ರೂ ಮನೆಗೆ ಬರಬಹುದೆಂದು ಪೋಷಕರು ಕಾದು ನೋಡಿದ್ದಾರೆ. ಆದ್ರೂ ಸಹಿತ ಮಗಳು ಮನೆಗೆ ಬಂದಿಲ್ಲ.
ಪೊಲೀಸರಿಗೆ ದೂರು : ಏಪ್ರಿಲ್ 20ರಂದು ಬೆಳಗ್ಗೆ 11 ಗಂಟೆ ಆದ್ರೂ ಮಗಳ ಬಗ್ಗೆ ಸುಳಿವು ಸಿಗಲಿಲ್ಲ. ಕೂಡಲೇ ಪೋಷಕರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಈ ವೇಳೆ ಪೋಷಕರು ನಮ್ಮ ಮಗಳು ಕಣ್ಮರೆಯಾಗುವ ಸ್ವಲ್ಪ ಸಮಯದ ಮೊದಲು ಈ ಮೊಬೈಲ್ ಸಂಖ್ಯೆಯಿಂದ ಫೋನ್ ಕರೆ ಬಂದಿತ್ತು ಎಂದು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರಿಂದ ನಿರ್ಲಕ್ಷ್ಯ : ನಾವು ನೀಡಿದ ನಂಬರ್ ಆಧಾರದ ಮೇಲೆ ಪೊಲೀಸರು ಹುಡುಕಲು ಆರಂಭಿಸಬೇಕಾಗಿತ್ತು. ಕೂಡಲೇ ಸ್ಪಂದಿಸಬೇಕಾದ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಈಗ ಸಾಧ್ಯವಿಲ್ಲ, ಸಂಜೆ ಬಂದು ಭೇಟಿ ಮಾಡುವುದಾಗಿ ಹೇಳಿ ನಮ್ಮನ್ನು ಕಳುಹಿಸಿದ್ದರು. ಸಂಜೆ ಸಂತ್ರಸ್ತೆಯ ಪೋಷಕರು ಮತ್ತೆ ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದ್ದಾರೆ.
ಮಗಳ ಸುಳಿವು ಪತ್ತೆ : ಫೋನ್ ನಂಬರ್ ಮೂಲಕ ಪೊಲೀಸರು ಶ್ರೀಕಾಂತ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಶ್ರೀಕಾಂತ್ ನಿಮ್ಮ ಮಗಳು ಆಸ್ಪತ್ರೆಯಲ್ಲಿದ್ದಾಳೆ ಎಂದು ಮಾಹಿತಿ ನೀಡಿದ್ದಾನೆ. ಆರೋಪಿ ನೀಡಿದ ಮಾಹಿತಿ ಮೇರೆಗೆ 20ರಂದು ರಾತ್ರಿ 11 ಗಂಟೆಗೆ ಸಂತ್ರಸ್ತೆಯ ಪೋಷಕರು ಹಾಗೂ ಕುಟುಂಬಸ್ಥರು ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು.
ಪೋಷಕರ ಎದುರೇ ಅತ್ಯಾಚಾರ : ಆಸ್ಪತ್ರೆಯಲ್ಲಿ ಪೋಷಕರು ತಮ್ಮ ಮಗಳನ್ನು ಹುಡುಕುತ್ತಿರುವಾಗ ಜೋರಂಗುಲ ಪವನ್ ಕಲ್ಯಾಣ್ ಯುವತಿ ಮೇಲೆ ಅತ್ಯಾಚಾರವೆಸುಗುತ್ತಿರುವುದು ಕಂಡು ಬಂದಿದೆ. ಕಣ್ಣೆದುರೇ ನಡೆಯುತ್ತಿರುವ ಭಯಾನಕತೆಯನ್ನು ನೋಡಿ ಪೋಷಕರು ಸಹಿಸಲಿಲ್ಲ. ಪವನ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ ತನಗಿಂತ ಮೊದಲು ಬಾಬುರಾವ್ ಕೂಡ ಸಂತ್ರಸ್ತೆಯ ಮೇಲೆ ಅತ್ಯಾಚಾರವೆಸಗಿದ್ದ ಎಂದು ತಿಳಿಸಿದ್ದಾನೆ. ಬಳಿಕ ಈ ಇಡೀ ದೌರ್ಜನ್ಯ ಬೆಳಕಿಗೆ ಬಂದಿದೆ.
ಆರೋಪಿಗಳು ಅಂದರ್ : ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ದಾರಾ ಶ್ರೀಕಾಂತ್, ಸೀತಾರಾಮಪುರದ ಚೆನ್ನಾ ಬಾಬುರಾವ್ ಮತ್ತು ವಿಂಚಿಪೇಟಾದ ಜೋರಂಗುಲ ಪವನ್ ಕಲ್ಯಾಣ್ನನ್ನು ಬಂಧಿಸಲಾಗಿದೆ. ವಿಜಯವಾಡ ದಿಶಾ ಪೊಲೀಸ್ ಠಾಣೆ ಎಸಿಪಿ ವಿವಿ ನಾಯ್ಡುರನ್ನು ಪ್ರಕರಣದ ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಆರಂಭದಲ್ಲಿ ನಾಪತ್ತೆ ಘಟನೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಂತರ ಅತ್ಯಾಚಾರದ ಸೆಕ್ಷನ್‌ಗಳನ್ನು ಸೇರಿಸಿದ್ದಾರೆ. ಆಕೆಗೆ ಉತ್ತಮ ಚಿಕಿತ್ಸೆ ನೀಡುವಂತೆ ಆಸ್ಪತ್ರೆ ಮೇಲಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ವಿಜಯವಾಡ ಪೊಲೀಸ್ ಆಯುಕ್ತ ಕಾಂತಿರಾಣಾ ಟಾಟಾ ತಿಳಿಸಿದ್ದಾರೆ.