ನವದೆಹಲಿ: ಪಶ್ಚಿಮ ಬಂಗಾಳದ 294 ವಿಧಾನಸಭೆ ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಈಗಾಗಲೇ 4 ಹಂತದ ಮತದಾನ ಮುಕ್ತಾಯಗೊಂಡಿದೆ. ದೀದಿ ನಾಡಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಈಗಾಗಲೇ ಅನೇಕ ಆರೋಪ - ಪ್ರತ್ಯಾರೋಪಗಳಿಗೂ ಕಾರಣವಾಗಿದೆ.
ಇಷ್ಟು ದಿನ ಸೈಲೆಂಟ್ ಆಗಿದ್ದ ಕಾಂಗ್ರೆಸ್ ಇದೀಗ ಚುನಾವಣಾ ಕಣಕ್ಕಿಳಿದಿದ್ದು, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಎರಡು ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದರು. ಇದು ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ. ಇದೇ ಮೊದಲ ಸಲ ಮಮತಾ ನಾಡಿಗೆ ಲಗ್ಗೆ ಹಾಕಿರುವ ರಾಹುಲ್ ಗಾಂಧಿ ಪ್ರಚಾರ ಸಭೆ ನಡೆಸಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿದರು. ಉತ್ತರ ದಿನಾಜ್ಪುರದ ಗೋಲ್ಪೋಖರ್ ಮತ್ತು ಡಾರ್ಜಲಿಂಗ್ನ ಶಿವಮಂದಿರ್ ಬಜಾರ್ನಲ್ಲಿ ಅವರು ಪ್ರಚಾರ ನಡೆಸಿದರು.
ಇದರ ಬಗ್ಗೆ ಮಾತನಾಡಿರುವ ಹಿರಿಯ ಪತ್ರಕರ್ತ ರಶೀದ್ ಕಿಡ್ವಾಯ್, ಪಂಚರಾಜ್ಯ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ತನ್ನದೇ ಆದ ತಂತ್ರ ಹೊಂದಿದೆ. ಕೇರಳದಲ್ಲಿ ಎಡಪಂಥೀಯರ ವಿರುದ್ಧ ಹೋರಾಡುತ್ತಿದ್ದರೆ, ಪಶ್ಚಿಮ ಬಂಗಾಳದಲ್ಲಿ ಅದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಹೀಗಾಗಿ ಕೇರಳ ಚುನಾವಣೆ ಮುಕ್ತಾಯವಾಗುವವರೆಗೆ ಅದು ತಮಿಳುನಾಡಿನಲ್ಲಿ ಪ್ರಚಾರ ನಡೆಸಿಲ್ಲ ಎಂದಿದ್ದಾರೆ.
ಪಂಚರಾಜ್ಯ ಚುನಾವಣೆಯ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಸೋಲಿಸುವುದು ಕಾಂಗ್ರೆಸ್ನ ಏಕೈಕ ಗುರಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಅನೇಕ ಹೇಳಿಕೆ ನೀಡಿದ್ದರೂ, ಅವರ ಮುಖ್ಯ ಟಾರ್ಗೆಟ್ ಬಿಜೆಪಿ ಹಾಗೂ ಆರ್ಎಸ್ಎಸ್ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಹುಲ್ ಗಾಂಧಿ ಪಶ್ಚಿಮ ಬಂಗಾಳದಲ್ಲಿ ಮಮತಾ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೇಂದ್ರದಲ್ಲಿ ಮೋದಿ ಏನು ಮಾಡ್ತಿದ್ದಾರೋ ಅದೇ ಕೆಲಸವನ್ನ ಮಮತಾ ರಾಜ್ಯದಲ್ಲಿ ಮಾಡುತ್ತಿದ್ದಾರೆ.