ಜಲ್ಪೈಗುರಿ(ಪಶ್ಚಿಮಬಂಗಾಳ): ಒಂದೊಳ್ಳೆ ಉದ್ದೇಶದ ಮುಂದೆ ಕೆಟ್ಟ ಚಟುವಟಿಕೆಗಳು ನಿಂತು ಹೋಗಲೇಬೇಕು. ಅದಕ್ಕೆ ಸಾಕ್ಷಿ ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿನ ಈ ಮರದ ಗ್ರಂಥಾಲಯ. ದೊಡ್ಡ ಮೈದಾನದಲ್ಲಿರುವ ಮರದಡಿ ನಡೆಯುತ್ತಿದ್ದ ಜೂಜು, ಪಾರ್ಟಿ, ಕುಡಿತದಂತಹ ಅನೈತಿಕ ಚಟುವಟಿಕೆಗಳನ್ನು ಒಂದು ಗ್ರಂಥಾಲಯ ಸಂಪೂರ್ಣವಾಗಿ ತೊಡೆದು ಹಾಕಿದೆ.
ಜಲ್ಪೈಗುರಿ ಜಿಲ್ಲೆಯ ಕಲ್ಚಿನಿ ಎಂಬಲ್ಲಿ ಶತಮಾನದ ಇತಿಹಾಸ ಇರುವ ಬೃಹತ್ ಮರವನ್ನು ಅವಿವೇಕಿಗಳು ಮದ್ಯಸೇವನೆ, ಜೂಜಾಟ, ಹರಟೆ ಹೊಡೆಯಲು ಬಳಸಿಕೊಳ್ಳುತ್ತಿದ್ದರು. ಇದನ್ನು ದಿನವೂ ಗಮನಿಸುತ್ತಿದ್ದ ಸಾಮಾಜಿಕ ಕಾಳಜಿ ಹೊಂದಿರುವ ಪದವೀಧರ ನಿಮೇಶ್ ಲಾಮಾ ಎಂಬುವವರು ಬದಲಿಸುವ ಸಂಕಲ್ಪ ಮಾಡಿದರು.
ಸಂಕಲ್ಪದಲ್ಲಿ ಹುಟ್ಟಿದ್ದೇ ಟ್ರೀ ಲೈಬ್ರರಿ: ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವ ಪ್ರಯತ್ನವಾಗಿ ನಿಮೇಶ್ ಲಾಮಾ ಅವರು ಶತಮಾನಗಳಷ್ಟು ಹಳೆಯದಾದ ಮರದಡಿ 25 ಪುಸ್ತಕಗಳುಳ್ಳ ಗ್ರಂಥಾಲಯವನ್ನು ಆರಂಭಿಸಿದರು. ಈ ವೃಕ್ಷದಡಿ ಕ್ರಮೇಣವಾಗಿ ಮಕ್ಕಳು, ಯುವಕರು ಬರಲು ಆರಂಭಿಸಿದರು.
25 ಪುಸ್ತಕಗಳೊಂದಿಗೆ ಪ್ರಾರಂಭವಾದ ಟ್ರೀ ಲೈಬ್ರರಿ ಈಗ 400 ಪುಸ್ತಕಗಳನ್ನು ಹೊಂದಿದೆ. ಓದಿನ ಜೊತೆಗೆ ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಕಲಿಸಲು ಲಾಮಾ ಅವರು ಗಿಟಾರ್ ನುಡಿಸುವುದು, ನೃತ್ಯಾಭ್ಯಾಸ, ಹಾಡು, ಚಿತ್ರಕಲೆ, ಚರ್ಚಾ ಸ್ಪರ್ಧೆ ಏರ್ಪಡಿಸುತ್ತಾರೆ. ಇದರಿಂದ ಅನಾಥವಾಗಿದ್ದ, ಅನೈತಿಕ ಚಟುವಟಿಕೆಗಳಿಗೆ ನೆರಳಾಗಿದ್ದ ಶತಮಾನದ ವೃಕ್ಷ ಈಗ ಶೈಕ್ಷಣಿಕ ಕೇಂದ್ರವಾಗಿ ಮಾರ್ಪಾಡಾಗಿದೆ.
ಶತಮಾನದ ಮರದಡಿ ನಡೆಯುತ್ತಿದ್ದ ಚಟುವಟಿಕೆಗಳು ನನ್ನನ್ನು ಬಾಧಿಸಿದ್ದವು. ಇದನ್ನು ತಡೆಯಲು ಲೈಬ್ರರಿ ಆರಂಭಿಸಿದೆ. ಇಂದು ಎಲ್ಲ ಅಕ್ರಮಗಳು ನಿಂತು ಮಕ್ಕಳು ಸ್ವಚ್ಛಂದವಾಗಿ ಬಂದು ಆಟ- ಪಾಠ ಕಲಿಯುತ್ತಾರೆ. ಇದು ಮನಸ್ಸಿಗೆ ನೆಮ್ಮದಿ ತಂದಿದೆ ಎಂದು ನಿಮೇಶ್ ಲಾಮಾ ಈಟಿವಿ ಭಾರತ್ ಜೊತೆ ಹಂಚಿಕೊಂಡರು.
ಓದಿ: ಸಪ್ತ ಸಾಗರದಾಚೆ ಕನ್ನಡ ಡಿಂಡಿಮ: ಜರ್ಮನಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ