ನವದೆಹಲಿ: ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ರೋಸ್ ಅವೆನ್ಯೂ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ. ಅಶೋಕ್ ಗೆಹ್ಲೋಟ್ ವಿರುದ್ಧ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಗೆಹ್ಲೋಟ್ ಪರವಾಗಿ ಹಿರಿಯ ವಕೀಲರಾದ ದಯನ್ ಕೃಷ್ಣನ್ ಮತ್ತು ಮೋಹಿತ್ ಮಾಥುರ್ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಶೇಖಾವತ್ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮನವಿ ಮಾಡಿದರು. ಎಸ್‌ಒಜಿ ತನಿಖಾ ವರದಿಯಲ್ಲಿ ಶೇಖಾವತ್ ಅವರ ಹೆಸರಿರುವುದರಿಂದ ರಾಜ್ಯದ ಗೃಹ ಸಚಿವರೂ ಆಗಿರುವ ಗೆಹ್ಲೋಟ್ ಅವರು ಸಂಜೀವನಿ ಹಗರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ. ಆದ್ದರಿಂದ, ಇಲ್ಲಿ ಮಾನನಷ್ಟ ಪ್ರಕರಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ವಿವರಿಸಿದರು.
ಗೆಹ್ಲೋಟ್ ಪರ ವಕೀಲರ ವಾದವನ್ನು ಆಲಿಸಿದ ಸೆಷನ್ಸ್ ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ಅವರು ತೀರ್ಪನ್ನು ಕಾಯ್ದಿರಿಸಿದರು ಮತ್ತು ನವೆಂಬರ್ 24 ರೊಳಗೆ ಪ್ರಕರಣದ ಸಂಬಂಧ ಲಿಖಿತ ವಾದಗಳನ್ನು ಸಲ್ಲಿಸುವಂತೆ ಕಕ್ಷಿದಾರರಿಗೆ ಸೂಚಿಸಿದರು.
ಗಜೇಂದ್ರ ಶೇಖಾವತ್ ಪರ ವಕೀಲರು ಮಾಡಿದ್ದ ವಾದ ಏನು?: ಇದಕ್ಕೂ ಮುನ್ನ, ನವೆಂಬರ್ 8 ರಂದು ಶೇಖಾವತ್ ಪರ ವಕೀಲ ವಿಕಾಸ್ ಪಹ್ವಾ ಅವರು ಅಶೋಕ್ ಗೆಹ್ಲೋಟ್ ಅವರ ಮರು ಪರಿಶೀಲನಾ ಅರ್ಜಿಯ ವಿರುದ್ಧ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಸಂಜೀವನಿ ಹಗರಣದಲ್ಲಿ ಅಶೋಕ್ ಗೆಹ್ಲೋಟ್ ಅವರು ಶೇಖಾವತ್ ಮತ್ತು ಅವರ ಕುಟುಂಬಸ್ಥರ ಹೆಸರುಗಳನ್ನು ಪ್ರಸ್ತಾಪಿಸುವ ಮೂಲಕ ಮಾನಹಾನಿ ಮಾಡಿದ್ದಾರೆ. ಇದು ಎಲ್ಲ ಮಾಧ್ಯಮ ವರದಿಗಳಲ್ಲಿ ದಾಖಲಾಗಿದೆ. ದೆಹಲಿ ಪೊಲೀಸರ ತನಿಖೆಯಲ್ಲೂ ಇದು ದೃಢಪಟ್ಟಿದೆ. ಇದಲ್ಲದೇ, ಗೆಹ್ಲೋಟ್ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ. ಆದ್ದರಿಂದ, ಗೆಹ್ಲೋಟ್ ಸಲ್ಲಿಸಿದ ಮರು ಪರಿಶೀಲನಾ ಅರ್ಜಿಗೆ ಯಾವುದೇ ಅರ್ಥವಿಲ್ಲ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.
ಅಶೋಕ್ ಗೆಹ್ಲೋಟ್ ಅವರು ಎಸ್ಒಜಿ ವರದಿಯ ಆಧಾರದ ಮೇಲೆ ರಾಜ್ಯದ ಗೃಹ ಸಚಿವರಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಗೆಹ್ಲೋಟ್ ವಿರುದ್ಧ ಶೇಖಾವತ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ ನಂತರ, ಶೇಖಾವತ್ ಅವರ ಹೆಸರನ್ನು ಎಸ್‌ಒಜಿಯಲ್ಲಿ ಸೇರಿಸಲಾಗಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಈ ಪ್ರಕರಣವನ್ನು ಮುಂದುವರಿಸಲು ಅನುಮತಿ ನೀಡಬೇಕು ಎಂದು ಶೇಖಾವತ್ ಪರ ವಕೀಲರು ಮನವಿ ಮಾಡಿದ್ದರು.
ಇದನ್ನೂ ಓದಿ: ನಿಮಗೆ ಬೇಕಾದುದನ್ನು ಮಾಡಲು ನಾವು ಕೋಳಿ ಮರಿಗಳಲ್ಲ: ಕಿಶನ್ ರೆಡ್ಡಿ ಬುಲ್ಡೋಜರ್ ಹೇಳಿಕೆಗೆ ಓವೈಸಿ ತಿರುಗೇಟು