ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ (Gaganyaan) ಗಗನಯಾನ ಮಿಷನ್ ಅಕ್ಟೋಬರ್ 21 ರಿಂದ ಪ್ರಾರಂಭವಾಗುತ್ತಿದೆ. ಈ ಕಾರ್ಯಾಚರಣೆಯು ಗಗನಯಾತ್ರಿಗಳನ್ನು ಅತ್ಯಂತ ಕಡಿಮೆ ಭೂಮಿಯ ಕಕ್ಷೆಗೆ (LEO) ಸುರಕ್ಷಿತವಾಗಿ ಕೊಂಡೊಯ್ಯುವುದನ್ನು ಒಳಗೊಂಡಿರುತ್ತದೆ. ನಂತರ ಅವರನ್ನು ಯಶಸ್ವಿಯಾಗಿ ಮರಳಿ ತರಲಾಗುವುದು. ಸ್ವದೇಶಿ ತಂತ್ರಜ್ಞಾನದಿಂದ ತಯಾರಿಸಿದ ಭಾರತೀಯ ವಾಹನಗಳ ಮೂಲಕ ಈ ಕಾರ್ಯಾಚರಣೆ ನಡೆಸಲಾಗುತ್ತದೆ. ಮಾನವಸಹಿತ ಮಿಷನ್ ಕಳುಹಿಸುವ ಮೊದಲು, ಅದನ್ನು ನಾಲ್ಕು ಹಂತಗಳಲ್ಲಿ ಪರೀಕ್ಷಿಸಲಾಗುತ್ತದೆ. ಅಕ್ಟೋಬರ್ 21 ಅಂದ್ರೆ ಶನಿವಾರದಂದು ಮೊದಲ ಹಂತದ ಪರೀಕ್ಷೆ ಆರಂಭವಾಗಲಿದೆ. ನಾಳೆ ಬೆಳಗ್ಗೆ 7.30 ರಿಂದ ಮೊದಲ ಹಂತದ ಪ್ರಯೋಗವನ್ನು ವೀಕ್ಷಿಸಬಹುದಾಗಿದೆ.
ನಾಲ್ಕು ಪರೀಕ್ಷೆಗಳು: ಗಗನಯಾನ ಮಿಷನ್‌ನ ಮೊದಲ ಪರೀಕ್ಷಾ ಹಾರಾಟವು ಅಕ್ಟೋಬರ್ 21 ರಂದು ನಡೆಯಲಿದೆ. ಇದನ್ನು ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 ಎಂದು ಹೆಸರಿಸಲಾಗಿದೆ. ಇದಾದ ಬಳಿಕ ಎರಡನೇ ಪರೀಕ್ಷಾರ್ಥ ಹಾರಾಟ ಡಿ-2, ಮೂರನೇ ಪರೀಕ್ಷಾರ್ಥ ಹಾರಾಟ ಡಿ-3 ಹಾಗೂ ನಾಲ್ಕನೇ ಪರೀಕ್ಷಾರ್ಥ ಹಾರಾಟ ಡಿ-4 ಎಂದು ಹೆಸರಿಸಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಲ್ಯಾಂಡಿಂಗ್: ಶನಿವಾರ ಮೊದಲ ಹಂತದ ಪ್ರಯೋಗ ನಡೆಯಲಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತದೆ. ಈ ಕಾರ್ಯಾಚರಣೆ ಅಡಿ ಸಿಬ್ಬಂದಿ ಮಾಡ್ಯೂಲ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ನಂತರ ಅದನ್ನು ಮತ್ತೆ ಭೂಮಿಗೆ ತರಲಾಗುತ್ತದೆ. ಬಂಗಾಳ ಕೊಲ್ಲಿಯಲ್ಲಿ ಲ್ಯಾಂಡಿಂಗ್ ಆಗಲಿದ್ದು, ನೌಕಾಪಡೆಯ ನೆರವಿನಿಂದ ಅದನ್ನು ವಾಪಸ್ ಪಡೆಯಲಾಗುವುದು. ಈ ಮಿಷನ್ ಯಶಸ್ವಿಯಾದರೆ, ಭಾರತವು ತನ್ನ ವಾಹನದಲ್ಲಿ ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳುಹಿಸಬಹುದಾಗಿದೆ.
ಭೂಮಿಯಿಂದ 400 ಕಿಮೀ ಎತ್ತರಕ್ಕೆ ಜಿಗಿಯಲಿದೆ ರಾಕೆಟ್: ಗಗನಯಾತ್ರಿ ಕುಳಿತಿರುವ ಕ್ಯಾಬಿನ್ ಅನ್ನು ಸಿಬ್ಬಂದಿ ಮಾಡ್ಯೂಲ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ನಾವು ಬಾಹ್ಯಾಕಾಶದ ಬಗ್ಗೆ ಮಾತನಾಡುವಾಗ ಅಂದರೆ ಭೂಮಿಯಿಂದ 400 ಕಿಲೋಮೀಟರ್ವರೆಗೆ ಹೋಗುವುದು ಮತ್ತು ನಂತರ ಆ ಎತ್ತರದಿಂದ ಭೂಮಿಗೆ ಕರೆತರಲಾಗುವುದು. ಶೌಚಾಲಯ, ಆಹಾರ ಸಂಗ್ರಹಣೆ, ಸಂಚರಣೆ ವ್ಯವಸ್ಥೆ ಸೇರಿದಂತೆ ಕ್ಯಾಬಿನ್‌ನಲ್ಲಿ ಎಲ್ಲ ಸೌಲಭ್ಯಗಳು ಇದರಲ್ಲಿ ಲಭ್ಯವಿರುತ್ತದೆ. ಕ್ಯಾಬಿನ್ ಒಳಗೆ ಬಾಹ್ಯಾಕಾಶ ವಿಕಿರಣದ ಪರಿಣಾಮವಿಲ್ಲ ಎಂದು ಇಸ್ರೋ ಹೇಳಿದೆ.
ಗಗನಯಾತ್ರಿ ಹೇಗೆ ಇಳಿಯುತ್ತಾರೆ?: ಇದರಲ್ಲಿ ಮುಖ್ಯವಾಗಿ ಎರಡು ವ್ಯವಸ್ಥೆಗಳಿವೆ. ಸಿಬ್ಬಂದಿ ಮಾಡ್ಯೂಲ್ ಮತ್ತು ಸಿಬ್ಬಂದಿ ಎಸ್ಕೇಪ್ ಸಿಸ್ಟಮ್. ಭೂಮಿಯಿಂದ 17 ಕಿಲೋಮೀಟರ್ ಎತ್ತರದಲ್ಲಿ ಲ್ಯಾಂಡಿಂಗ್ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಸಿಬ್ಬಂದಿ ಎಸ್ಕೇಪ್ ಸಿಸ್ಟಮ್ ಸಹಾಯ ಮಾಡುತ್ತದೆ ಮತ್ತು ಗಗನಯಾತ್ರಿ ಪ್ಯಾರಾಚೂಟ್ ಸಹಾಯದಿಂದ ಇಳಿಯಲು ಸಾಧ್ಯವಾಗುತ್ತದೆ.
ರೋಬೋಟ್ ಮೇಲೆ ಪ್ರಯೋಗ: ಈ ಕಾರ್ಯಾಚರಣೆ ಯಶಸ್ಸಿನ ನಂತರ ಪರೀಕ್ಷೆಯ ಎರಡನೇ ಹಂತದಲ್ಲಿ ಮಾನವರಹಿತ ಮಿಷನ್ ಪ್ರಾರಂಭವಾಗುತ್ತದೆ. ಕಾರ್ಯಾಚರಣೆಯಲ್ಲಿ ಮಾನವನ ಜಾಗದಲ್ಲಿ ರೋಬೋಟ್ ಅಥವಾ ಮನುಷ್ಯನನ್ನು ಹೋಲುವ ಯಂತ್ರವನ್ನು ಇರಿಸಲಾಗುತ್ತದೆ. ಈ ಮಿಷನ್ ಕೂಡ ಯಶಸ್ವಿಯಾದರೆ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಬಹುದಾಗಿದೆ.
ಮಿಷನ್ ಬಗ್ಗೆ ಇಸ್ರೋ ಹೇಳಿದ್ದೇನು?: ಗಗನಯಾನ ಮಿಷನ್ ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಮಿಷನ್ ಆಗಿದೆ. ಇದರ ಅಡಿ ಮೂರು ಸದಸ್ಯರನ್ನು 400 ಕಿಮೀ ಎತ್ತರಕ್ಕೆ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಇದಾದ ನಂತರ ಅವರನ್ನು ಸುರಕ್ಷಿತವಾಗಿ ಹಿಂತಿರುಗಿಸಲಾಗುವುದು. ಅಮೆರಿಕ, ರಷ್ಯಾ, ಚೀನಾ ನಂತರ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.
ಈ ಕಾರ್ಯಾಚರಣೆಯ ಪ್ರಯೋಜನವೇನು?: ಇಸ್ರೋ ಪ್ರಕಾರ, ಸೌರವ್ಯೂಹವನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ರೋಬೋಟ್ ಪ್ರೋಗ್ರಾಂ ಹೊಸ ಶಕ್ತಿಯನ್ನು ಪಡೆಯುತ್ತದೆ. ನವೋದ್ಯಮ ಕ್ಷೇತ್ರದಲ್ಲಿ ಪ್ರಗತಿ ಕಾಣಲಿದೆ. ಹೊಸ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಸಿಗಲಿದೆ. ಜಾಗತಿಕ ಬಾಹ್ಯಾಕಾಶ ನಿಲ್ದಾಣದ ಅಭಿವೃದ್ಧಿಗೆ ನಾವು ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಅಭಿವೃದ್ಧಿ ಮತ್ತು ಉದ್ಯಮದ ನಡುವಿನ ಪಾಲುದಾರಿಕೆ ಹೆಚ್ಚಾಗುತ್ತದೆ. ಪ್ರಬಲ ವಿದೇಶಾಂಗ ನೀತಿ ಉಪಕರಣಗಳನ್ನು ಬಲಪಡಿಸಲಾಗುವುದು ಎಂದು ಇಸ್ರೋ ಹೇಳಿದೆ.
ಭಾರತವು ಬಾಹ್ಯಾಕಾಶದಲ್ಲಿ ನಿಲ್ದಾಣ ಸ್ಥಾಪಿಸಬಹುದು: ಭಾರತವು ಭವಿಷ್ಯದಲ್ಲಿ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲು ಸಹ ಪರಿಗಣಿಸಬಹುದು. ಇದರ ಪರಿಣಾಮಗಳನ್ನು ವಿವರವಾಗಿ ಅಧ್ಯಯನ ಮಾಡಲಾಗುವುದು. ಭಾರತದ ಬಾಹ್ಯಾಕಾಶ ನಿಲ್ದಾಣವು ಮೂಲವಾಗಿರುತ್ತದೆ ಮತ್ತು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆಗೆ ಬಳಸಬಹುದಾಗಿದೆ.
ಓದಿ: 'ಗಗನಯಾನ' ಪರೀಕ್ಷಾರ್ಥ ಪ್ರಯೋಗದ ಸಮಯ ಬದಲು: ಸಾರ್ವಜನಿಕರಿಗೆ ವೀಕ್ಷಣೆಯ ಅವಕಾಶ, ನೋಂದಣಿ ಕ್ರಮ ಹೀಗೆ..