ನವದೆಹಲಿ: ಭಾರತದಲ್ಲಿ ಈ ವರ್ಷ ಜಿ20 ಶೃಂಗಸಭೆ ನಡೆಯುತ್ತಿದ್ದು ಇಂದು ವಿದೇಶಾಂಗ ಸಚಿವರ ಮಹತ್ವದ ಸಭೆ ಆಯೋಜಿಸಲಾಗಿದೆ. ಚೀನಾ, ರಷ್ಯಾ, ಸೌದಿ ಅರೇಬಿಯಾ ಸೇರಿದಂತೆ ಗುಂಪಿನ ಎಲ್ಲ ವಿದೇಶಾಂಗ ಸಚಿವರು ಭಾಗವಹಿಸಲಿದ್ದಾರೆ. ಈಗಾಗಲೇ ಹಲವು ದೇಶಗಳ ಸಚಿವರು ಭಾರತಕ್ಕೆ ಆಗಮಿಸಿದ್ದು, ಅವರನ್ನು ಸ್ವಾಗತಿಸಲಾಗಿದೆ. ಜಪಾನ್ ವಿದೇಶಾಂಗ ಸಚಿವರು ಸಭೆಗೆ ಗೈರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಜಿ20 ರಾಷ್ಟ್ರಗಳ ಸದಸ್ಯ ದೇಶವಾದ ರಷ್ಯಾದ ವಿದೇಶಾಂಗ ಸಚಿವ ಸರ್ಗೈ ಲಾವ್ರೋವ್, ಚೀನಾದ ಕಿನ್ ಗ್ಯಾಂಗ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಗಿದೆ. ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ಮತ್ತು ಭಾರತದೊಂದಿಗೆ ಗಡಿ ವಿವಾದ ಹೊಂದಿರುವ ಚೀನಾ ಸಭೆಯಲ್ಲಿ ಪಾಲ್ಗೊಂಡಿರುವುದು ಮಹತ್ವ ಪಡೆದುಕೊಂಡಿದೆ.
ಇದಲ್ಲದೇ, ಕ್ರೊವೇಷಿಯಾ, ಸ್ಪ್ಯಾನಿಶ್, ಸೌದಿ ಅರೇಬಿಯಾ, ಇಂಡೋನೇಷಿಯಾ, ಬ್ರೆಜಿಲ್, ಮಾರಿಷಸ್, ಟರ್ಕಿ, ಆಸ್ಟ್ರೇಲಿಯಾ, ನೈಜೀರಿಯಾ ಮತ್ತು ಮೆಕ್ಸಿಕೊ ರಾಷ್ಟ್ರಗಳ ವಿದೇಶಾಂಗ ಸಚಿವರು ಈಗಾಗಲೇ ದೆಹಲಿಗೆ ಬಂದಿಳಿದಿದ್ದಾರೆ. ಅವರನ್ನು ಭಾರತದ ವಿದೇಶಾಂಗ ಇಲಾಖೆ ಅಧಿಕಾರಿಗಳು ಬರಮಾಡಿಕೊಂಡರು.
ಡಬ್ಲ್ಯೂಟಿಒ ನಿರ್ದೇಶಕಿ ಭಾಗಿ: ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ವಿಶ್ವ ವ್ಯಾಪಾರ ಸಂಸ್ಥೆಯ ಮಹಾನಿರ್ದೇಶಕ ನಗೋಜಿ ಒಕೊಂಜೊ ಇವೆಲಾ ಅವರೂ ಕೂಡ ಭಾಗವಹಿಸುವರು. ಇಲ್ಲಿನ ವಿಮಾನ ನಿಲ್ದಾಣಕ್ಕೆ ಅವರು ಕಳೆದ ರಾತ್ರಿ ಆಗಮಿಸಿದರು.
2ನೇ ಬೃಹತ್ ಸಭೆ: ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಎರಡನೇ ದೊಡ್ಡ ಜಿ20 ಸಚಿವರ ಸಭೆ ಇದಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಹಣಕಾಸು ಸಚಿವರ ಸಭೆ ಆಯೋಜಿಸಲಾಗಿದೆ. ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯುವ ಈ ಸಭೆಯಲ್ಲಿ 40 ನಿಯೋಗಗಳು, 30 ಅಂತಾರಾಷ್ಟ್ರೀಯ ಸಂಸ್ಥೆಗಳು ಭಾಗವಹಿಸಲಿವೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ವಿಶೇಷವೆಂದರೆ ವಿದೇಶಾಂಗ ಮಂತ್ರಿಗಳ ಅತಿ ದೊಡ್ಡ ಕೂಟಗಳಲ್ಲಿ ಇಂದು ಆಯೋಜನೆಗೊಂಡಿರುವ ಸಭೆಯೂ ಒಂದು. ಭೇಟಿ ನೀಡುವ ಗಣ್ಯರಿಗೆ ನಿನ್ನೆ ಸಂಜೆ ಔತಣಕೂಟ ನೀಡಲಾಗಿದೆ.
ಸಭೆಗೆ ಜೈಶಂಕರ್ ಅಧ್ಯಕ್ಷ: ಇಂದು ನಡೆಯುವ 2 ಅಧಿವೇಶನಗಳಿಗೆ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೊದಲ ಅಧಿವೇಶನವು ಬಹುಪಕ್ಷೀಯತೆ ಮತ್ತು ಆಹಾರ ಮತ್ತು ಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದರೆ, ಎರಡನೇ ಅಧಿವೇಶನ ಭಯೋತ್ಪಾದನೆ ಮತ್ತು ಮಾದಕ ದ್ರವ್ಯಗಳು, ಜಾಗತಿಕ ಕೌಶಲ್ಯ ಮ್ಯಾಪಿಂಗ್ ಮತ್ತು ಜಾಗತಿಕ ಪ್ರತಿಭೆ ಪೂಲ್‌ಗಳ ಮೇಲೆ ಚರ್ಚೆ ನಡೆಯಲಿದೆ. ಜೊತೆಗೆ, ಹೊಸ ಬೆದರಿಕೆಗಳ ಮೇಲೆಯೂ ಪ್ರಸ್ತಾಪವಾಗಲಿದೆ.
ಜಪಾನ್ ಸಚಿವರು ಗೈರು: ಜಪಾನ್ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ ಸಭೆಗೆ ಗೈರಾಗಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ತಮ್ಮ ದೇಶದಲ್ಲಿ ಕಾರ್ಯದೊತ್ತಡ ಕಾರಣ ದೆಹಲಿಯಲ್ಲಿ ನಡೆಯುವ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಭಾರತ ಮತ್ತು ಜಪಾನ್ ಜಿ20 ಸಭೆಯ ಚರ್ಚೆಗಳು ಮತ್ತು ಸಮಾಲೋಚನೆಗಳ ವಿಷಯದಲ್ಲಿ ಉತ್ಕೃಷ್ಟವಾದ ಸಹಕಾರ ಹೊಂದಿವೆ. ಜಪಾನ್ ಭಾಗವಹಿಸುವಿಕೆಯನ್ನು ಭಾರತವು ಬಹಳವಾಗಿ ಗೌರವಿಸುತ್ತದೆ. ಆದರೆ, ತಮ್ಮ ದೇಶದ ಕಾರ್ಯದ ಒತ್ತಡದ ಕಾರಣದಿಂದ ಬರಲು ಸಾಧ್ಯವಾಗುತ್ತಿಲ್ಲ. ಸಭೆಗೆ ಜಪಾನ್ ನಿಯೋಗವನ್ನು ಕಳುಹಿಸಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.