ಹೈದರಾಬಾದ್: ಹಿರಿಯ ನಾಯಕ ಗುಲಾಂ ನಬಿ ರಾಜೀನಾಮೆ ಬಳಿಕ ಜಿ-23 ಗುಂಪಿನ ನಾಯಕರಲ್ಲೂ ರಾಜೀನಾಮೆ ಪರ್ವ ಆರಂಭವಾಗಿದೆ. ತೆಲಂಗಾಣ ನಾಯಕ ಎಂ.ಎ.ಖಾನ್ ಕೂಡ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಹಾಳುಗೆಡವಲು ರಾಹುಲ್ ಗಾಂಧಿಯೇ ಕಾರಣ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಖಾನ್ ಅವರು ಕಾಂಗ್ರೆಸ್‌ನ ಬಂಡಾಯ G-23 ಗುಂಪಿನ ಸಕ್ರಿಯ ಸದಸ್ಯರಾಗಿದ್ದರು ಮತ್ತು 2008 ರಿಂದ 2020 ರವರೆಗೆ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಬದಲಾವಣೆಯನ್ನು ತರುತ್ತಿದೆ ಮತ್ತು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಬಯಸುತ್ತಿದೆ ಎಂಬುದನ್ನು ದೇಶದ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಖಾನ್ ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ 40 ವರ್ಷಗಳ ಈ ಪಯಣವನ್ನು ಈಗ ಕೊನೆಗೊಳಿಸುತ್ತಿರುವುದಾಗಿ ಬರೆದಿದ್ದಾರೆ.
ಕಾಂಗ್ರೆಸ್ ಬಿಡಲ್ಲ ಎಂದ ತಿವಾರಿ.. ಇನ್ನು, G-23 ಸದಸ್ಯ ಮತ್ತು ಪಂಜಾಬ್ ಸಂಸದ ಮನೀಶ್ ತಿವಾರಿ ಸಹ ಶನಿವಾರ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕೆಂಡಾಮಂಡಲಾಗಿದ್ದಾರೆ. ಹೈಕಮಾಂಡ್ ರಾಜಿ ಮಾಡಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಹೀಗಾಗಿ ಗುಲಾಂ ನಬಿ ಅಜಾದ್ ಪಕ್ಷ ತೊರೆದಿದ್ದಾರೆ ಎಂದು ತಿವಾರಿ ಹೇಳಿದ್ದಾರೆ. ನಾನು ಬಾಡಿಗೆದಾರನಲ್ಲ, ನಾನು ಆ ಮನೆಯನ್ನು ನಿರ್ಮಿಸಲಿದ್ದೇನೆ, ಆದ್ದರಿಂದ ನಾನು ಪಕ್ಷವನ್ನು ಬಿಡುವುದಿಲ್ಲ ಎಂದಿದ್ದಾರೆ.
ಹಾಗೆ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಅವರು ಆಜಾದ್ ಅವರ ನಿವಾಸಕ್ಕೆ ಆಗಮಿಸಿದ್ದು, ಇಬ್ಬರೂ ಸುಮಾರು ಎರಡು ಗಂಟೆಗಳ ಕಾಲ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಶರ್ಮಾ ಅವರು ಕಳೆದ ವಾರ ಹಿಮಾಚಲ ಕಾಂಗ್ರೆಸ್‌ನ ಸ್ಟೀರಿಂಗ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆನಂದ್ ಶರ್ಮಾ ಕೂಡ ಕಾಂಗ್ರೆಸ್ ನಿಂದ ಸ್ವತಂತ್ರರಾಗಬಹುದು ಎಂಬ ಊಹಾಪೋಹಗಳಿವೆ.
ಜೆ & ಕೆ ನಲ್ಲಿ ರಾಜೀನಾಮೆ ಪರ್ವ.. ಆಜಾದ್ ಅವರು ಕಾಂಗ್ರೆಸ್‌ನಿಂದ ನಿರ್ಗಮಿಸುವುದಾಗಿ ಘೋಷಿಸಿದ ನಂತರ, ಐದು ಜೆ & ಕೆ ನಾಯಕರಾದ ಜಿ.ಎಂ. ಸರೂರಿ, ಹಾಜಿ ಅಬ್ದುಲ್ ರಶೀದ್, ಮೊಹಮ್ಮದ್ ಅಮೀನ್ ಭಟ್, ಗುಲ್ಜಾರ್ ಅಹ್ಮದ್ ವಾನಿ ಮತ್ತು ಚೌಧರಿ ಮೊಹಮ್ಮದ್ ಅಕ್ರಮ್ ಅವರು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇವರಲ್ಲಿ ಸರೋದಿ ಹೊರತುಪಡಿಸಿ ಉಳಿದ ಎಲ್ಲರೂ ಮಾಜಿ ಶಾಸಕರು.
ರಾಹುಲ್ ಬಗ್ಗೆ ಆಜಾದ್ ಹೇಳಿದ್ದೇನು?: ಶುಕ್ರವಾರ ಗುಲಾಂ ನಬಿ ಆಜಾದ್ ಅವರು ರಾಜೀನಾಮೆ ನೀಡುವಾಗ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡಿದ್ದರು. ಆಜಾದ್ ಅವರು 5 ಪುಟಗಳ ಪತ್ರದಲ್ಲಿ ಬರೆದಿದ್ದಾರೆ. ರಾಹುಲ್ ಗಾಂಧಿ ಪಕ್ಷಕ್ಕೆ ಪ್ರವೇಶಿಸುವ ಮೂಲಕ ಸಮಾಲೋಚನಾ ಕಾರ್ಯವಿಧಾನವನ್ನು ನಾಶಪಡಿಸಿದರು. ಅದರಲ್ಲೂ 2013ರ ಜನವರಿಯಲ್ಲಿ ಉಪಾಧ್ಯಕ್ಷರಾದ ಬಳಿಕ ಪಕ್ಷದಲ್ಲಿ ಈ ವ್ಯವಸ್ಥೆ ಸಂಪೂರ್ಣ ನಿಂತು ಹೋಗಿತ್ತು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಮಧ್ಯಾಹ್ನ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ: ರಾಹುಲ್ ಮೇಲೆ ಒತ್ತಡ, ಕೌನ್ ಬನೇಗಾ ಪ್ರೆಸಿಡೆಂಟ್?