ಉದಯ್‌ಪುರ(ರಾಜಸ್ಥಾನ): ಭಾರತದಲ್ಲಿ ಮುಂದಿನ ವರ್ಷ ನಡೆಯುವ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಂಡಿದೆ. ಇದರ ಬೆನ್ನಲ್ಲೇ ಸಭೆಯ ಪೂರ್ವಭಾವಿಯಾಗಿ ರಾಜಸ್ಥಾನದ ಉದಯಪುರದಲ್ಲಿ ಮೊದಲ ಜಿ-20 ಶೆರ್ಪಾ ಸಭೆ ಆರಂಭವಾಗಿದೆ. ಬಿಗಿ ಭದ್ರತೆಯ ನಡುವೆ ಬೆಳಗ್ಗೆ 8.30ಕ್ಕೆ ಸಭೆ ಶುರುವಾಗಿದೆ. ಸದಸ್ಯ ರಾಷ್ಟ್ರಗಳ ರಾಜತಾಂತ್ರಿಕರು ಸಭೆಯಲ್ಲಿ ಭಾಗಿಯಾಗಿದ್ದು, ಪ್ರಸ್ತುತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಜಿ20 ಶೆರ್ಪಾ ಸಭೆಯಲ್ಲಿ ಭಾರತದ ಅಮಿತಾಭ್ ಕಾಂತ್ ಅವರು ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದರ ನಂತರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಜಯ್ ಭಾಯ್ ಸೇಠ್ ಅವರು ಸಭೆಗೆ ಕೆಲ ಮಾಹಿತಿ ನೀಡಲಿದ್ದಾರೆ. ತಾಂತ್ರಿಕ ರೂಪಾಂತರ, ಹಸಿರು ಅಭಿವೃದ್ಧಿ ಮತ್ತು ಲೈಫ್, ಮಹಿಳಾ ಸಬಲೀಕರಣ, ಎಸ್‌ಡಿಜಿಗಳ ಅನುಷ್ಠಾನದ ವೇಗ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಸಂವಾದ ನಡೆಸಲಿದ್ದಾರೆ.
ಈ ಮೊದಲ ಶೆರ್ಪಾ ಸಭೆಯು ಮುಂದಿನ ಸಭೆಗಳಿಗೆ ಕಾರ್ಯಸೂಚಿಯಾಗಲಿದೆ. ಈ ಸಭೆಯು ಭಾರತದ ಆದ್ಯತೆಗಳು ಮತ್ತು ಅದರ G20 ಅಧ್ಯಕ್ಷತೆಯ ಅವಲೋಕನವನ್ನು ಮಾಡಿಕೊಡಲಿದೆ. 2023ರಲ್ಲಿ ನವದೆಹಲಿಯಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ನಾಯಕರು ಮಂಡಿಸಲಿರುವ ವಿಷಯಗಳ ಬಗ್ಗೆ ಒಮ್ಮತ ಸಾಧಿಸಲು ಶೆರ್ಪಾ ಸಭೆಗಳು ದಿಕ್ಸೂಚಿಯಾಗಲಿವೆ.
ಇಂಡೋನೇಷ್ಯಾದಲ್ಲಿ ಈಚೆಗೆ ಮುಕ್ತಾಯವಾದ ಜಿ-20 ಶೃಂಗಸಭೆಯ ಬಳಿಕ ಅದರ ಅಧ್ಯಕ್ಷ ಸ್ಥಾನವನ್ನು ಭಾರತ ಔಪಚಾರಿಕವಾಗಿ ಡಿಸೆಂಬರ್ 1 ರಂದು ವಹಿಸಿಕೊಂಡಿತು.