ಲಖನೌ: ಫಂಗಸ್ ಹೊಂದಿರುವ ಸ್ಪೋರ್ಟ್ಸ್ ಡ್ರಿಂಕ್ ಬಾಟಲಿಯನ್ನು ಮಾರಾಟ ಮಾಡಿದ್ದಕ್ಕಾಗಿ ಪೆಪ್ಸಿಕೋ ಕಂಪನಿಯ ಅಧಿಕೃತ ಮಳಿಗೆಗೆ ಗ್ರಾಹಕರ ನ್ಯಾಯಾಲಯ 1.10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಹಣ ಪಾವತಿಸಿದ್ದರೂ ಬ್ರಾಡ್‌ಬ್ಯಾಂಡ್ ಸಂಪರ್ಕ ನೀಡದ ಕಾರಣಕ್ಕೆ ಅಂಬಾನಿ ಮಾಲೀಕತ್ವದ ರಿಲಯನ್ಸ್ ಕಮ್ಯುನಿಕೇಷನ್ಸ್‌ಗೆ 15,000 ರೂ. ದಂಡ ವಿಧಿಸಿತು.
ನೋಯ್ಡಾದಲ್ಲಿರುವ ಪೆಪ್ಸಿಕೋ ಅಧಿಕೃತ ಮಳಿಗೆ ದೂರು ನಿರ್ಲಕ್ಷಿಸಿರುವುದು ಮಾತ್ರವಲ್ಲದೇ ಗ್ರಾಹಕರಿಗೆ ಬಿಲ್ ನೀಡಲು ಕೂಡ ನಿರಾಕರಿಸಿದೆ ಎಂದು ಆರೋಪಿಸಲಾಗಿದೆ. ವಿಚಾರಣೆಯಲ್ಲಿ, ಅರ್ಜುನ್ಗಂಜ್ನ ನಿವಾಸಿ ಭರತ್, "ಮಾರ್ಚ್ 22, 2021ರಂದು ನೋಯ್ಡಾದ ಪೆಪ್ಸಿಕೋದ ಅಧಿಕೃತ ಮಳಿಗೆ ಗಟೋರೆಡ್ ನಿಂದ ಕ್ರೀಡಾ ಪಾನೀಯ ಬಾಟಲಿಯನ್ನು ಖರೀದಿಸಿದ್ದೆ. ಆ ಸಮಯದಲ್ಲಿ ಕೋವಿಡ್ ನಿರ್ಬಂಧಗಳಿದ್ದ ಕಾರಣ ಬಿಲ್ ಅನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಲಾಗುವುದು ಎಂದು ಹೇಳಿದ್ದರು" ಎಂದು ಗ್ರಾಹಕ ವೇದಿಕೆಗೆ ತಿಳಿಸಿದ್ದಾರೆ.
"ಆದರೆ ಮನೆಗೆ ಬಂದು ಬಾಟಲಿ ತೆರೆದು ನೋಡಿದಾಗ ಅದರೊಳಗೆ ಫಂಗಸ್ ಬಂದಿರುವುದು ಕಂಡು ಬಂದಿದೆ. ಆ ತಕ್ಷಣವೇ ಅಂಗಡಿಗೆ ದೂರು ನೀಡಿದ್ದೆ. ಅಂಗಡಿಯವರು ನನ್ನ ದೂರು ಆಲಿಸಲಿಲ್ಲ. ಬಿಲ್ ಕೇಳಿದಾಗಲೂ ನೀಡಲು ನಿರಾಕರಿಸಿದ್ದರು. ಪದೇ ಪದೇ ನೋಟಿಸ್ ಕಳುಹಿಸಿದರೂ, ನನಗೆ ಕೊನೆಯಲ್ಲಿ ಯಾವುದೇ ಉತ್ತರ ಬಂದಿಲ್ಲ. ಅಲಿಗಂಜ್ನಲ್ಲಿರುವ ಲ್ಯಾಬ್ನಲ್ಲಿ ಸ್ಪೋರ್ಟ್ಸ್ ಡ್ರಿಂಕ್ ಸ್ಯಾಂಪಲ್ ಪರೀಕ್ಷೆ ನಡೆಸಲಾಗಿದೆ. ಪಾನೀಯದಲ್ಲಿ ಕಲುಷಿತವಾಗಿರುವುದು ದೃಢಪಟ್ಟಿದೆ. ಪರೀಕ್ಷಾ ವರದಿ ಆಧರಿಸಿ, ಗ್ರಹಕರ ವೇದಿಕೆಯಲ್ಲಿ ದೂರು ದಾಖಲಿಸಲಾಗಿದೆ" ಎಂದು ದೂರುದಾರರು ತಿಳಿಸಿದ್ದಾರೆ.
ವಿಚಾರಣೆಯಲ್ಲಿ ಗ್ರಾಹಕರ ವೇದಿಕೆ ಅಧ್ಯಕ್ಷ ಅಮರಜೀತ್ ತ್ರಿಪಾಠಿ ಹಾಗೂ ಸದಸ್ಯೆ ಪ್ರತಿಭಾ ಸಿಂಗ್ ಅವರು, ಅಕ್ಟೋಬರ್ 20, 2023ರಂದು ಹೊರಡಿಸಿದ ಆದೇಶದಂತೆ , ಗ್ರಾಹಕರಿಗೆ 1.10 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ದಂಡವನ್ನು ಸರಿಯಾದ ಸಮಯಕ್ಕೆ ಪಾವತಿಸದಿದ್ದರೆ ಗ್ರಾಹಕರಿಗೆ ದಂಡದ ಜತೆಗೆ ವಾರ್ಷಿಕ ಶೇ 9 ಬಡ್ಡಿಸಹಿತ ಪಾವತಿಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ, ಗ್ರಾಹಕರ ವೇದಿಕೆ (2ನೇ) ಅಧ್ಯಕ್ಷ ಅಮರಜೀತ್ ತ್ರಿಪಾಠಿ ಹಾಗೂ ಸದಸ್ಯೆ ಪ್ರತಿಭಾ ಸಿಂಗ್ ಅವರು, ಹಣ ಪಾವತಿಸಿದ್ದರೂ, ಬ್ರಾಡ್‌ಬ್ಯಾಂಡ್ ಸಂಪರ್ಕ ನೀಡದೇ ಇದ್ದ ರಿಲಯನ್ಸ್ ಕಮ್ಯುನಿಕೇಷನ್ಸ್ ಮೇಲೆ 15,000 ರೂ. ದಂಡ ವಿಧಿಸಿದ್ದಾರೆ. ಕಾನ್ಪುರ ರಸ್ತೆಯ ಎಲ್ಡಿಎ ಕಾಲೊನಿ ನಿವಾಸಿ ಸುರೇಂದ್ರ ವಿಕ್ರಮ್ ಸಿಂಗ್ ನೀಡಿದ ದೂರಿನ ವಿಚಾರಣೆ ನಡೆಸಿ, ಈ ದಂಡ ವಿಧಿಸಲಾಗಿದೆ.
ಸುರೇಂದ್ರ ವಿಕ್ರಮ್ ಸಿಂಗ್ 2016 ಮಾರ್ಚ್ 28ರಂದು 1491 ರೂ ಪಾವತಿಸಿ, ರಿಲಯನ್ಸ್ ಕಮ್ಯುನಿಕೇಷನ್ಸ್ ಬ್ರಾಡ್‌ಬ್ಯಾಂಡ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿದ್ದರು. ಆದರೆ ಸಂಪೂರ್ಣ ಹಣ ನೀಡಿದರೂ ಕಂಪನಿ ಬ್ರಾಡ್‌ಬ್ಯಾಂಡ್ ಸಂಪರ್ಕ ನೀಡಿರಲಿಲ್ಲ. ಸುರೇಂದ್ರ ವಿಕ್ರಮ್ ಸಿಂಗ್ ಅವರು ಪದೇ ಪದೇ ದೂರು ನೀಡಿದರೂ, ಯಾವುದೇ ಪ್ರಯೋಜನವಾಗಿರಲಿಲ್ಲ.
ಅಕ್ಟೋಬರ್ 5ರಂದು ಗ್ರಾಹಕರ ವೇದಿಕೆ, ಕಂಪನಿಯ ನಿರ್ಲಕ್ಷ್ಯ ಎಂದು ಪರಿಗಣಿಸಿ 15,000 ರೂ ದಂಡ ವಿಧಿಸಿದೆ. ಜತೆಗೆ ದೂರು ಸಲ್ಲಿಸಿದ ದಿನಾಂಕದಿಂದ ವಾರ್ಷಿಕ ಶೇ 9 ಬಡ್ಡಿ ಸೇರಿಸಿ, ದಂಡ ಪಾವತಿಸುವಂತೆ ಹೇಳಿದೆ. ಮಾತ್ರವಲ್ಲದೆ, ದೂರುದಾರರ ಮಾನಸಿಕ ಕಿರುಕುಳ ಹಾಗೂ ವ್ಯಾಜ್ಯ ವೆಚ್ಚದ ಹಣವನ್ನೂ ಪಾವತಿಸುವಂತೆ ಸೂಚಿಸಿದೆ.
ಇದನ್ನೂ ಓದಿ: ಹಲ್ಲುನೋವಿಗೆ ಚಿಕಿತ್ಸೆ ಪಡೆದ ಮಹಿಳೆಗೆ ಅಂಗವೈಕಲ್ಯ: ವೈದ್ಯನಿಗೆ 9.2 ಲಕ್ಷ ರೂ. ದಂಡ