ಶ್ರೀನಗರ: ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಭಾನುವಾರ ಶ್ರೀನಗರದ ರಾಜ್‌ಬಾಗ್‌ನಲ್ಲಿರುವ ಪ್ರತ್ಯೇಕತಾವಾದಿ ಆಲ್ ಪಾರ್ಟಿಸ್ ಹುರಿಯತ್ ಕಾನ್ಫರೆನ್ಸ್ (ಎಪಿಎಚ್‌ಸಿ) ಕಚೇರಿಯನ್ನು ಜಪ್ತಿ ಮಾಡಿದೆ. ದೆಹಲಿ ಮೂಲದ ವಿಶೇಷ ಎನ್‌ಐಎ ನ್ಯಾಯಾಲಯವು ಎಪಿಎಚ್‌ಸಿಯ ಆಸ್ತಿಯನ್ನು ಜಪ್ತಿ ಮಾಡುವ ಎನ್ಐಎ ಮನವಿಗೆ ಪರಿಗಣಿಸಿ ಈ ಕ್ರಮಕ್ಕೆ ಅನುಮತಿ ನೀಡಿತ್ತು. ಅದಾಗಿ ಒಂದು ದಿನದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹುರಿಯತ್ ಕಚೇರಿಯನ್ನು ಸೀಲ್ ಮಾಡಿದೆ.
ಎನ್ಐಎ ಅಧಿಕಾರಿಗಳು ಹುರಿಯತ್ ಕಚೇರಿಗೆ ಆಗಮಿಸಿ, ನ್ಯಾಯಾಲಯದ ಆದೇಶದಂತೆ ಶ್ರೀನಗರದಲ್ಲಿರುವ ಅದರ ಕಚೇರಿಯ ಪ್ರವೇಶದ್ವಾರದಲ್ಲಿ ಜಪ್ತಿ ನೋಟಿಸಿನ ಪ್ರತಿಯನ್ನು ಅಂಟಿಸಿದರು. ಜುಲೈ 24, 2017 ರಂದು ಬಂಧಿಸಲ್ಪಟ್ಟಿರುವ ನಯೀಮ್ ಖಾನ್, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯಕ್ಕಾಗಿ ಹವಾಲಾ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ದೇಶೀಯವಾಗಿ ಮತ್ತು ವಿದೇಶದಲ್ಲಿ ಹಣ ಸ್ವೀಕರಿಸಿದ್ದಾನೆ ಮತ್ತು ಸಂಗ್ರಹಿಸಿದ್ದಾನೆ ಎಂದು ಇತ್ತೀಚಿನ ನ್ಯಾಯಾಲಯದ ಆದೇಶ ತಿಳಿಸಿದೆ.
ಈ ಜಪ್ತಿ ನೋಟಿಸು ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಅಡಿಯಲ್ಲಿ ದಾಖಲಾಗಿರುವ, ಎನ್‌ಐಎ ವಿರುದ್ಧ ಮೊಹಮ್ಮದ್ ಹಫೀಜ್ ಸಯೀದ್ ಮತ್ತು ಇತರರು ಪ್ರಕರಣಗಳಿಗೆ ಸಂಬಂಧಿಸಿದೆ. ಎನ್‌ಐಎ ತನ್ನ ಅರ್ಜಿಯಲ್ಲಿ, ಹುರಿಯತ್ ನಾಯಕ ನಯೀಮ್ ಖಾನ್ ವಿರುದ್ಧ ಸಾಕಷ್ಟು ಪುರಾವೆಗಳಿವೆ ಮತ್ತು ಆತ ಈ ಆಸ್ತಿಯಲ್ಲಿ ಭಾಗಶಃ ಮಾಲೀಕತ್ವ ಹೊಂದಿದ್ದಾನೆ ಎಂದು ಹೇಳಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಗುಂಪುಗಳ ಚಟುವಟಿಕೆಗಳಿಗೆ ಹುರಿಯತ್ ಮತ್ತು ಇತರ ಉಗ್ರಗಾಮಿ ಸಂಘಟನೆಗಳು ಹಣ ನೀಡುತ್ತಿವೆ ಎಂದು ಎನ್‌ಐಎ ಆರೋಪಿಸಿದೆ.
1993 ರಲ್ಲಿ ರೂಪುಗೊಂಡ ಹುರಿಯತ್ ಕಾನ್ಫರೆನ್ಸ್ 26 ಪ್ರತ್ಯೇಕತಾವಾದಿ ಸಂಘಟನೆಗಳ ಸಂಯೋಜನೆಯಾಗಿದೆ. ಆದರೆ ಸರ್ಕಾರವು ಪ್ರತ್ಯೇಕತಾವಾದಿ ಗುಂಪುಗಳನ್ನು ನಿಷೇಧಿಸಿದ ನಂತರ ಆಗಸ್ಟ್ 2019 ರಿಂದ ಅದರ ಕಚೇರಿಯನ್ನು ಮುಚ್ಚಲಾಗಿದೆ. ಹುರಿಯತ್ ಕಚೇರಿಯ ಹೊರಗೆ ಅಂಟಿಸಲಾದ ಎನ್ಐಎ ನೋಟೀಸ್ನಲ್ಲಿ ಹೀಗೆ ಬರೆಯಲಾಗಿದೆ: ರಾಜ್‌ಬಾಗ್‌ನಲ್ಲಿ ಆಲ್ ಪಾರ್ಟಿ ಹುರಿಯತ್ ಕಾನ್ಫರೆನ್ಸ್‌ನ ಕಚೇರಿ ಇರುವ ಕಟ್ಟಡವು ಪ್ರಸ್ತುತ ವಿಚಾರಣೆಯನ್ನು ಎದುರಿಸುತ್ತಿರುವ ನಯೀಮ್ ಅಹ್ಮದ್ ಖಾನ್ ಅವರ ಜಂಟಿ ಮಾಲೀಕತ್ವದಲ್ಲಿದೆ ಎಂದು ಎಲ್ಲಾ ಸಾರ್ವಜನಿಕರಿಗೆ ಈ ಮೂಲಕ ತಿಳಿಸಲಾಗುತ್ತದೆ. 2023 ರ ಜನವರಿ 27 ರ ನವದೆಹಲಿಯ ಪಟಿಯಾಲಾ ವಿಶೇಷ NIA ಕೋರ್ಟ್ ನ ಆದೇಶದ ಮೇರೆಗೆ ಈ ಆಸ್ತಿ ಜಪ್ತಿ ಮಾಡಲಾಗಿದೆ.
ಹಲವಾರು ತೀರ್ಪುಗಳನ್ನು ಉಲ್ಲೇಖಿಸಿರುವ ಕೋರ್ಟ್, ಸೆಕ್ಷನ್ 24 ಇದು ಭಯೋತ್ಪಾದನೆಯ ಆದಾಯದ ಅಭಿವ್ಯಕ್ತಿಯನ್ನು ವಿಸ್ತರಿಸುತ್ತದೆ ಮತ್ತು ಇಂಥ ಅಭಿವ್ಯಕ್ತಿಯು ಭಯೋತ್ಪಾದನೆಗಾಗಿ ಬಳಸಲು ಉದ್ದೇಶಿಸಿರುವ ಯಾವುದೇ ಆಸ್ತಿಯನ್ನು ಒಳಗೊಂಡಿರುತ್ತದೆ ಎಂದು ಸ್ಪಷ್ಟಪಡಿಸುತ್ತದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಎಪಿಎಚ್‌ಸಿಯ ಕಟ್ಟಡವು ವಿವಿಧ ಪ್ರತಿಭಟನೆಗಳು, ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟದ ಚಟುವಟಿಕೆಗಳಿಗೆ ಧನಸಹಾಯ, ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ನಿರುದ್ಯೋಗಿ ಯುವಕರನ್ನು ನೇಮಿಸಿಕೊಳ್ಳುವುದು ಮತ್ತು ಭಾರತ ಸರ್ಕಾರದ ವಿರುದ್ಧ ಸಮರ ಸಾರಲು ಮತ್ತು ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಭೆಗಳನ್ನು ನಡೆಸುತ್ತಿದ್ದ ಸ್ಥಳವಾಗಿದೆ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: ಯಾರು ಏನೇ ಹೇಳಿದ್ರು ಟಿಕೆಟ್ ಕೊಡೋದು ಹೆಚ್ಡಿಕೆ ನೇತೃತ್ವದಲ್ಲೇ.. ತಮ್ಮನ ಪರ ರೇವಣ್ಣ ಬ್ಯಾಟಿಂಗ್