ಇಂಫಾಲ(ಮಣಿಪುರ): ತೀವ್ರಗಾಮಿ ಸಂಘಟನೆಗಳೊಂದಿಗೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡು ಶಾಂತಿ ನೆಲೆಸಲು ಪ್ರಯತ್ನಿಸುತ್ತಿರುವ ನಡುವೆಯೇ, ಮಣಿಪುರದಲ್ಲಿ ಹೊಸ ವರ್ಷದ ಮೊದಲ ದಿನವೇ ನಾಲ್ವರನ್ನು ಹತ್ಯೆ ಮಾಡಲಾಗಿದೆ. ಘರ್ಷಣೆಯಲ್ಲಿ 14 ಮಂದಿ ಗಾಯಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಐದು ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದೆ.
ಇಲ್ಲಿನ ತೌಬಲ್ ಜಿಲ್ಲೆಯ ಲಿಲಾಂಗ್ ಚಿಂಗ್ಜಾವೊ ಪ್ರದೇಶದಲ್ಲಿ ಸೋಮವಾರ ಸಂಜೆ ಗುಂಡಿನ ದಾಳಿ ನಡೆದಿದೆ. ಹಣ ವಸೂಲಿ ವಿಚಾರಕ್ಕೆ ನಡೆದ ವಾಗ್ವಾದದಲ್ಲಿ ಗುಂಡು ಹಾರಿಸಲಾಗಿದೆ. ಘಟನೆಯನ್ನು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಖಂಡಿಸಿದ್ದಾರೆ. ಕಣಿವೆ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಏನಾಯ್ತು?: ಲಿಲಾಂಗ್ ಚಿಂಗ್ಜಾವೊ ಪ್ರದೇಶದ ನಿವಾಸಿಯೊಬ್ಬರ ಬಳಿಕ ಕೆಲ ದಾಳಿಕೋರರು ಹಣ ವಸೂಲಿ ಮಾಡಲು ಬಂದಿದ್ದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ಸ್ಥಳೀಯರು ಜೊತೆಗೂಡಿ ಗುಂಪನ್ನು ಚದುರಿಸಿದ್ದಾರೆ. ದುಷ್ಕರ್ಮಿಗಳು ಪರಾರಿಯಾಗುತ್ತಿದ್ದಾಗ, ಗುಂಡು ಹಾರಿಸಿದ್ದಾರೆ. ಇದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಓರ್ವ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ದುಷ್ಕರ್ಮಿಗಳು ಪರಾರಿಯಾಗಿದ್ದು, ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಮುಸುಕಿನಲ್ಲಿ ಬಂದು ದಾಳಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐದು ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ: ಹೊಸ ಹಿಂಸಾಚಾರ ಘಟನೆ ಎಲ್ಲೆಡೆ ಕಿಚ್ಚಿನಂತೆ ಹಬ್ಬಿದ ತಕ್ಷಣ ಎಚ್ಚೆತ್ತ ಸರ್ಕಾರ, ರಾಜ್ಯದ ಐದು ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಿದೆ. ತೌಬಾಲ್, ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ, ಕಕ್ಚಿಂಗ್ ಮತ್ತು ಬಿಷ್ಣುಪುರ್ ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ದಾಳಿಯ ನಂತರ ಆಕ್ರೋಶಗೊಂಡ ಸ್ಥಳೀಯರು ದಾಳಿಕೋರರು ಆಗಮಿಸಿದ್ದ ನಾಲ್ಕು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಂತಿ ಕಾಪಾಡಲು ಸಿಎಂ ಮನವಿ: ಹಿಂಸಾಚಾರವನ್ನು ಖಂಡಿಸಿರುವ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರು, ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಈ ಬಗ್ಗೆ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು, ದಾಳಿಯ ಹಿಂದಿರುವವರನ್ನು ಬಂಧಿಸಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಶೀಘ್ರವೇ ಬಂಧಿಸಿ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಲಾಗುವುದು. ಅಲ್ಲಿಯವರೆಗೂ ಜನರು ಶಾಂತಿ ಕಾಪಾಡಬೇಕು. ಯಾವುದೇ ಅನಾಹುತಗಳಿಗೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.
ಲಿಲಾಂಗ್ ಕ್ಷೇತ್ರದ ಶಾಸಕ ಅಬ್ದುಲ್ ನಾಸಿರ್ ಮಾತನಾಡಿ, ಅಧಿಕಾರಿಗಳು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು. ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಜನರು ಆತಂಕ ಪಡಬೇಡಿ ಮತ್ತು ಹಿಂಸಾಚಾರಕ್ಕೆ ಅವಕಾಶ ನೀಡಬೇಡಿ ಎಂದು ಕೋರಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಆರಂಭವಾದ ಜನಾಂಗೀಯ ಹಿಂಸಾಚಾರದ ನಂತರ ಈವರೆಗೂ 180 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಮಹಿಳೆಯರಿಬ್ಬರನ್ನು ಬೆತ್ತಲೆ ಮಾಡಿ ಮೆರವಣಿಗೆ ನಡೆಸಿದ್ದು, ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು.
ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಸಂಘರ್ಷ: ಬಂಡುಕೋರರ ಗುಂಡಿನ ಚಕಮಕಿಯಲ್ಲಿ 13 ಜನರ ಹತ್ಯೆ