ತೇಜ್‌ಪುರ (ಅರುಣಾಚಲ ಪ್ರದೇಶ) : ಎಂಟು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ನಿವಾಸಿ ತಪೋರ್ ಪುಲ್ಲೋಮ್ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಆತ ಭಾರತದ ಗಡಿಯಲ್ಲಿರುವ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ತಪೋರ್ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ಏಜೆನ್ಸಿಗಳು ಏಷ್ಟೇ ಕಾರ್ಯಾಚರಣೆ ನಡೆಸಿದರೂ ಪುಲ್ಲೋಮ್ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈಗಲೂ ಅವರ ಕುಟುಂಬಸ್ಥರು ಶೋಧ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ತಪೋರ್ ಅವರ ಸೊಸೆ ಅಮ್ನಿ ದಿರು ರಾಜ್ಯದ ಸಂಸದರು, ಕೇಂದ್ರ ಸಚಿವರು ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡುತ್ತಿದ್ದಾರೆ.
ಪೂರ್ವ ಅರುಣಾಚಲ ಪ್ರದೇಶದ ಶಿ ಯೋಮಿ ಜಿಲ್ಲೆಯ ತಾಗಿ ಬೋಗು ಪಾಸ್ ಎಂದು ಕರೆಯಲ್ಪಡುವ ಗಡಿ ಪ್ರದೇಶದ ಬಳಿ ತಾಪೋರ್ ಪುಲ್ಲೋಮ್ ಮತ್ತು ಅವರ ಸ್ನೇಹಿತ ತಾಕ್ ಯಾರ್ಶಿ ಬೇಟೆಯಾಡಲು ತೆರಳಿದ್ದರು. 2015 ರ ಸೆಪ್ಟೆಂಬರ್ ಮೊದಲ ವಾರ ಬೇಟೆಗೆ ಹೋಗಿದ್ದು, ಸೆಪ್ಟೆಂಬರ್ 21 ರಂದು ಹಿಂತಿರುಗಲು ಮುಂದಾಗಿದ್ದರು. ಆದ್ರೆ, ಬೇಟೆ ಬಳಿಕ ತಾಕ್ ಯಾರ್ಶಿ ಮಾತ್ರ ಹಿಂದಿರುಗಿದ್ದು, ನಡೆದ ಭಯಾನಕ ಕಥೆಯೊಂದನ್ನು ವಿವರಿಸಿದ್ದರು. ಚೀನೀ ಪಡೆಗಳು ಗಡಿಯೊಳಗೆ ನುಸುಳಿ ತಾಪೋರ್ ಅವರನ್ನು ಅಪಹರಿಸಿದರು. ನಾನು ಅವರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆ ಎಂದು ತಿಳಿಸಿದ್ದರು.
ಬಳಿಕ, ಪುಲ್ಲೋಮ್ ಅವರ ಕುಟುಂಬಸ್ಥರು ಪತ್ತೆ ಕಾರ್ಯ ಪ್ರಾರಂಭಿಸಿದರು. ಘಟನೆಯ ಬಗ್ಗೆ ಸ್ಥಳೀಯ ಪೊಲೀಸರು ಮತ್ತು ಸೇನೆಗೆ ಕೂಡ ಮಾಹಿತಿ ನೀಡಿದರು. ಡಿಸೆಂಬರ್‌ನಲ್ಲಿ ಅಮ್ನಿ ದಿರು ಆಗಿನ ಕೇಂದ್ರ ಸಚಿವ ಕಿರಣ್ ರಿಜಿಜು ಅವರನ್ನು ಸಂಪರ್ಕಿಸಿ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದರು. ಪೂರ್ವ ಅರುಣಾಚಲ ಪ್ರದೇಶದ ಸಂಸದ ತಪಿರ್ ಗಾವೊ ಅವರು 2022 ರಲ್ಲಿ ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಚೀನಾದ ಸಹವರ್ತಿಗಳೊಂದಿಗೆ ಚರ್ಚೆ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಬಳಿಕ, ಈ ವರ್ಷದ ಮಾರ್ಚ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಂಸದ ತಪಿರ್ ಗಾವೊ ವಿಷಯ ತಿಳಿಸಿದ್ದರು.
ಇದೀಗ ಮತ್ತೆ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿರುವ ದಿರು, ತಾಪೋರ್ ಪುಲ್ಲೋಮ್ ಅವರು ಪಿಎಲ್‌ಎ ನಿಂದ ಕೊಲ್ಲಲ್ಪಟ್ಟಿದ್ದಾರೆಯೇ?, ಚಿತ್ರಹಿಂಸೆಗೆ ಒಳಗಾಗಿದ್ದಾರಾ? ಅಥವಾ ಜೀವಂತವಾಗಿದ್ದಾರೆಯೇ? ಎಂದು ಪ್ರತಿ ದಿನವೂ ನೋವಿನಿಂದ ನಮ್ಮ ಕುಟುಂಬ ಕಾಯುತ್ತಿದೆ. ನಮ್ಮ ಮನವಿಗಳು ಸಂಬಂಧಪಟ್ಟವರ ಕಿವಿಗೆ ಬಿದ್ದಿವೆಯೇ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಚೀನಾ ಅತಿಕ್ರಮಣ ತಡೆಗೆ ಇನ್ನಷ್ಟು ಕ್ರಮ ಬೇಕು : ಅರುಣಾಚಲ ಕಾಂಗ್ರೆಸ್ ಮುಖಂಡರ ಪ್ರತಿಪಾದನೆ
ಇನ್ನು, ಸೆಪ್ಟೆಂಬರ್‌ನಲ್ಲಿ ಭಾರತ-ಚೀನಾ ಗಡಿಯಲ್ಲಿರುವ ಅಪ್ಪರ್ ಸುಬನ್ಸಿರಿ ಜಿಲ್ಲೆಯ ಅರಣ್ಯದಲ್ಲಿ ಬೇಟೆಯಾಡಲು ಹೋಗಿದ್ದ ಐವರು ಯುವಕರನ್ನು ಚೀನಾ ಸೇನೆ ಅಪಹರಿಸಿತ್ತು. ಬಳಿಕ, ರಾಜತಾಂತ್ರಿಕ ಮತುಕತೆ ನಡೆಸಿದ ನಂತರ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಅಂತಿಮವಾಗಿ ಕಾಣೆಯಾದ ಅರುಣಾಚಲ ಪ್ರದೇಶದ ಐವರು ಯುವಕರನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿತ್ತು.