ಮುಂಬೈ: ಭಾರತದಲ್ಲಿ ಫ್ರೆಂಚ್ ರಾಯಭಾರ ಕಚೇರಿಯು ಮಾಡರ್ನಾ ಲಸಿಕೆ ಸಂಗ್ರಹಿಸಿದ್ದು, ಮುಂಬೈನಲ್ಲಿರುವ ತಮ್ಮ ಪ್ರಜೆಗಳಿಗೆ ನೀಡುತ್ತಿದೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆರೋಪಿಸಿದ್ದಾರೆ.
ಕೋವಿಶೀಲ್ಡ್, ಕೊವ್ಯಾಕ್ಸಿನ್ ಮತ್ತು ಸ್ಪುಟ್ನಿಕ್ ವಿ 3 ಲಸಿಕೆಗಳ ಬಳಕೆಗೆ ಭಾರತ ಸರ್ಕಾರ ಅನುಮತಿ ನೀಡಿದೆ. ಆದರೆ, ನನಗೆ ದೊರೆತ ಮಾಹಿತಿಯ ಪ್ರಕಾರ, ಭಾರತದಲ್ಲಿರುವ ಫ್ರೆಂಚ್ ರಾಯಭಾರ ಕಚೇರಿಯು ಮಾಡರ್ನಾ-ಟಿಎಕ್ಸ್ ಲಸಿಕೆಯನ್ನು ಸಂಗ್ರಹಿಸಿ, ಅವರ ದೇಶದ ಪ್ರಜೆಗಳಿಗೆ ನೀಡುತ್ತಿದೆ ಎಂದು ನವಾಬ್ ಮಲಿಕ್ ಟ್ವೀಟ್ ಮಾಡಿದ್ದಾರೆ.
ನಮ್ಮ ದೇಶದಲ್ಲಿ ವಾಸಿಸುವ ಫ್ರಾನ್ಸ್ನವರಿಗೆ ಅನುಮತಿ ರಹಿತ ಲಸಿಕೆಯನ್ನು ಹೇಗೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಈವರೆಗೆ ಸುಮಾರು 18 ಕೋಟಿ ಡೋಸ್ ಲಸಿಕೆ ನೀಡಲಾಗಿದೆ: ಕೇಂದ್ರ ಆರೋಗ್ಯ ಸಚಿವಾಲಯ
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್, ಅವರ ಆರೋಪಕ್ಕೆ ಯಾವುದೇ ನಿಖರ ಮಾಹಿತಿಗಳಿಲ್ಲ. ನನಗೆ ಬಂದಿರುವ ಮಾಹಿತಿ ಪ್ರಕಾರ ಭಾರತದಲ್ಲಿರುವ ಪ್ರತಿ ರಾಯಭಾರ ಕಚೇರಿಯು ಇಲ್ಲಿ ಕೆಲಸ ಮಾಡುವ ತನ್ನದೇ ದೇಶದ ಸಿಬ್ಬಂದಿಗೆ ಕೋವಿಡ್ ವ್ಯಾಕ್ಸಿನ್ ಒದಗಿಸಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದ ಜನರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಬದಲಾಗಿ ಕೇಂದ್ರದತ್ತ ಬೊಟ್ಟು ಮಾಡಿ ಸಮಯ ವ್ಯರ್ಥ ಮಾಡುತ್ತಿದೆ ಎಂದು ದೂರಿದ್ದಾರೆ.