ಜೈಪುರ(ರಾಜಸ್ಥಾನ): ಪ್ರಿಯಕರನೊಂದಿಗೆ ಮದುವೆಯಾಗುವ ಕನಸು ಕಾಣುತ್ತಿದ್ದ ಪ್ರೇಯಸಿಗೆ ಪ್ರೀತಿಯ ಹೆಸರಿನಲ್ಲಿ ವಂಚನೆ ಮಾಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದ್ದು, ಲಕ್ಷಾಂತರ ರೂಪಾಯಿ ಮೋಸ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾಳೆ.
ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಈ ಘಟನೆ ನಡೆದಿದ್ದು, ಮದುವೆ ಮಾಡಿಕೊಳ್ಳುವ ಹೆಸರಿನಲ್ಲಿ ವಂಚನೆ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಯುವತಿಗೆ 10 ಲಕ್ಷ ರೂಪಾಯಿ ಮೋಸ ಮಾಡಲಾಗಿದ್ದು, ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕಿ, ಕೊಲೆ ಬೆದರಿಕೆ ಹಾಕಿದ್ದಾನೆ. ಇದರಿಂದ ಮನನೊಂದ 21 ವರ್ಷದ ಯುವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾಳೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ರಾಹುಲ್ ಕುಮಾರ್ ಎಂಬ ಯುವಕ ಹಾಗೂ 21 ವರ್ಷದ ಯುವತಿ ಒಟ್ಟಿಗೆ ಓದುತ್ತಿದ್ದರು. ಈ ವೇಳೆ ಪರಿಚಯವಾಗಿ ಪರಸ್ಪರ ಪ್ರೀತಿಸಿದ್ದಾರೆ. ಈ ವೇಳೆ ಮದುವೆಯಾಗುವುದಾಗಿ ನಂಬಿಸಿ, ಆಕೆಯಿಂದ ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದಾನೆ. ಕಳೆದ ಕೆಲ ದಿನಗಳ ಹಿಂದೆ ಮದುವೆ ಮಾಡಿಕೊಳ್ಳುವಂತೆ ಯುವತಿ ಕೇಳಿದಾಗ ಅದಕ್ಕೆ ನಿರಾಕರಣೆ ಮಾಡಿದ್ದಾನೆ. ಜೊತೆಗೆ ಹಣ ನೀಡಲು ಹಿಂದೇಟು ಹಾಕಿದ್ದು, ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕನ ಪುತ್ರನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ
ಇದರ ಬೆನ್ನಲ್ಲೇ ಸಂತ್ರಸ್ತೆ ಆರೋಪಿ ವಿರುದ್ಧ ಅನೇಕ ಸಾಕ್ಷ್ಯಗಳೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪ್ರಕರಣ ದಾಖಲಾಗುತ್ತಿದ್ದಂತೆ ಆತ ತಲೆಮರೆಸಿಕೊಂಡಿದ್ದು, ಇದೀಗ ಆತನಿಗೋಸ್ಕರ ಶೋಧಕಾರ್ಯ ಮುಂದುವರೆದಿದೆ.