ಕೋಲ್ಕತ್ತಾ: ಇಂದು 2021-22ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ವಿರೋಧ ಪಕ್ಷಗಳ ನಾಯಕರ ಟೀಕೆಗೆ ಗುರಿಯಾಗಿದ್ದಾರೆ.
ಬಜೆಟ್ ವಿರುದ್ಧ ಕಿಡಿಕಾರಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದೊಂದು 'ವಂಚಕ ಸರ್ಕಾರದ ಮೋಸದ ಬಜೆಟ್', ಜನವಿರೋಧಿ ಬಜೆಟ್. ಭಾರತದ ಮೊದಲ ಕಾಗದರಹಿತ ಬಜೆಟ್ ಎಲ್ಲ ವಲಯಗಳನ್ನೂ ಮಾರಾಟ ಮಾಡಿದೆ. ಇನ್ನು ಅಸಂಘಟಿತ ವಲಯಕ್ಕಂತೂ ಏನೂ ದೊರೆತಿಲ್ಲ. ಕೇಂದ್ರ ಸರ್ಕಾರ ಎಂದಿಗೂ ಸುಳ್ಳು ಭರವಸೆಗಳನ್ನೇ ನೀಡುತ್ತದೆ ಎಂದು ಆರೋಪಿಸಿದ್ದಾರೆ.
ಉತ್ತರ ಬಂಗಾಳದ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ಚಿಂತೆ ಬೇಡ, ರಾಜ್ಯದಲ್ಲಿ 'ಮಾ ಮತಿ ಮಾನುಷ್' ಸರ್ಕಾರ (ಟಿಎಂಸಿ) ಮತ್ತೆ ಬರುತ್ತದೆ. ಬಿಜೆಪಿ ಕೇವಲ ಒಂದು ಗ್ಯಾಸ್ ಬಲೂನ್ ಎಂದು ಹೇಳಿದರು.
ಇದನ್ನೂ ಓದಿ: ಕೇಂದ್ರ ಬಜೆಟ್: ಚುನಾವಣೆ ಎದುರಿಸಲಿರುವ ರಾಜ್ಯಗಳ ಅಭಿವೃದ್ಧಿಗೆ ಬಂಪರ್ ಆಫರ್
ಇಂದಿನ ಕೇಂದ್ರ ಬಜೆಟ್ನಲ್ಲಿ ಈ ವರ್ಷ ವಿಧಾನಸಭಾ ಚುನಾವಣೆಗಳು ನಡೆಸಲಿರುವ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ಬಂಪರ್ ಆಫರ್ ನೀಡಲಾಗಿದೆ. ಪಶ್ಚಿಮ ಬಂಗಾಳದಲ್ಲೂ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ 675 ಕಿ.ಮೀ ಹೆದ್ದಾರಿ ಯೋಜನೆಗೆ ಬಜೆಟ್ನಲ್ಲಿ 25 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ.
ಅಲ್ಲದೇ ಪಶ್ಚಿಮ ಬಂಗಾಳ ಮತ್ತು ಅಸ್ಸೋಂನಲ್ಲಿ ಚಹಾ ವ್ಯಾಪಾರಿಗಳಿಗಾಗಿ 1,000 ಕೋಟಿ ರೂ. ಅನುದಾನವನ್ನು ಬಜೆಟ್ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಎರಡು ರಾಜ್ಯಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ವಿಶೇಷ ಯೋಜನೆಯನ್ನು ಜಾರಿ ತರಲಾಗುವುದು ಎಂದು ಕೂಡ ಸೀತಾರಾಮನ್ ಹೇಳಿದ್ದರು.