ಇಡುಕ್ಕಿ (ಕೇರಳ): ವರುಣನ ಆರ್ಭಟದಿಂದಾಗಿ ಕೇರಳ ರಾಜ್ಯ ಭೀಕರ ಪ್ರವಾಹ ಮತ್ತು ಭೂಕುಸಿತಕ್ಕೆ ಸಾಕ್ಷಿಯಾಗಿದ್ದು, ಈವರೆಗೆ 27 ಜನರನ್ನು ಬಲಿ ಪಡೆದಿದೆ. ಭೂಕುಸಿತದಲ್ಲಿ ಸಿಲುಕಿ ತನ್ನ ಮಕ್ಕಳೊಂದಿಗೆ ಸಾಯುವ ಕೆಲವೇ ಕ್ಷಣಗಳ ಮುನ್ನ ಮಹಿಳೆಯೊಬ್ಬರು ಚಿತ್ರೀಕರಿಸಿದ್ದ ಪ್ರವಾಹದ ವಿಡಿಯೋ ಈಗ ವೈರಲ್ ಆಗುತ್ತಿದೆ.
ಇಡುಕ್ಕಿಯಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದರು. ಮೃತರನ್ನು ಫೌಜಿಯಾ (28), ಆಕೆಯ ಇಬ್ಬರು ಮಕ್ಕಳಾದ ಅಮೀನ್ ಸಿಯಾದ್ (7), ಆಮ್ನಾ ಸಿಯಾದ್ (7) ಹಾಗೂ ಆಕೆಯ ಸಂಬಂಧಿ ಶಾಜಿ ಚಿರಯಿಲ್ (55), ಆಕೆಯ ಸೋದರಳಿಯರಾದ ಅಫ್ಜಾನ್ ಫೈಸಲ್ (9), ಅಹಿಯಾನ್ ಫೈಸಲ್ (4) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: Watch: ಕೇರಳದಲ್ಲಿ ಪ್ರವಾಹದ ನಡುವೆ ವಿವಾಹ; ಅಡುಗೆ ಪಾತ್ರೆಯೇ ವೆಡ್ಡಿಂಗ್ ಕಾರು!
ಈ ದುರಂತ ಸಂಭವಿಸುವ ಮುನ್ನ ಫೌಜಿಯಾ, ತನ್ನ ಮನೆಗೆ ಹಾಗೂ ಸುತ್ತಮುತ್ತಲೂ ಹರಿದು ಬರುತ್ತಿರುವ ಪ್ರವಾಹದ ನೀರಿನ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿದು ಸಂಬಂಧಿಕರಿಗೆ ವಾಟ್ಸ್ ಆ್ಯಪ್ ಮೂಲಕ ಕಳುಹಿಸಿದ್ದರು. ಈ ವಿಡಿಯೋದಲ್ಲಿ ಆಕೆಯ ಇಬ್ಬರು ಮಕ್ಕಳು ಸಹ ಕಾಣಿಸುತ್ತಾರೆ. ಕೆಲವೇ ಕ್ಷಣಗಳಲ್ಲಿ ಆಕೆಯ ಮನೆಯ ಬಳಿ ದೊಡ್ಡ ಭೂಕುಸಿತ ಸಂಭವಿಸಿದ್ದು, ಐವರು ಜೀವಂತ ಸಮಾಧಿಯಾದರು.
ಇಂದು ಬೆಳಗ್ಗೆ ಅವರ ಮೃತದೇಹಗಳು ಪತ್ತೆಯಾಗಿದ್ದು, ಆಮ್ನಾ, ಅಫ್ಜಾನ್ ಮತ್ತು ಅಹಿಯಾನ್ ಮೃತದೇಹಗಳು ಒಬ್ಬರಿಗೊಬ್ಬರು ಅಪ್ಪಿಕೊಂಡಿರುವ ಸ್ಥಿತಿಯಲ್ಲಿ, ಶಾಜಿ ಚಿರಯಿಲ್ ಅವರ ಮೃತದೇಹ ಮಣಿಮಾಲಾ ನದಿಯಲ್ಲಿ ಪತ್ತೆಯಾಗಿದೆ.