ಅಕೋಲಾ : ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಾಲ್ವರು ಸಾವನ್ನಪ್ಪಿರುವ ಘಟನೆ ಗುರುವಾರ-ಶುಕ್ರವಾರ ನಡುವಿನ ರಾತ್ರಿಯಲ್ಲಿ ಸಂಭವಿಸಿದೆ. ವಾಶಿಮ್ ಜಿಲ್ಲೆಯ ಮಾಲೇಗಾಂವ್ ತಾಲೂಕಿನ ಪಂಗ್ರಿ ಕುಟೆ ಗ್ರಾಮದ ಶುಭಮ್ ಕುಟೆ, ಧನಂಜಯ್ ನವಗ್ರೆ, ವಿಶಾಲ್ ನವಗ್ರೆ, ಮಂಗೇಶ್ ರೌತ್ ಸೇರಿದಂತೆ ನಾಲ್ವರು ಸ್ನೇಹಿತರು ಗಜಾನನ್ ಮಹಾರಾಜ್ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದರು. ಬಳಿಕ ಸ್ವಗ್ರಾಮಕ್ಕೆ ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ಅಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರುಗಡೆಯಿಂದ ಬರುತ್ತಿದ್ದ ಮಿನಿ ಲಾರಿ ನಡುವೆ ಅಪಘಾತ ಸಂಭವಿಸಿದೆ.
ಮಿನಿ ಲಾರಿ ಮತ್ತು ಕಾರು ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸುತ್ತಿರುವಾಗ ಮತ್ತೊಬ್ಬ ಯುವಕ ಉಸಿರಾಡುತ್ತಿರುವುದು ಕಂಡು ಬಂದಿದೆ.
ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದರು. ಆದ್ರೆ, ಆ ಯುವಕ ಮಾರ್ಗ ಮಧ್ಯೆದಲ್ಲೇ ಪ್ರಾಣ ತೆತ್ತಿದ್ದಾನೆ. ಈ ಸುದ್ದಿ ಪೋಷಕರಿಗೆ ತಿಳಿದಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಈಗ ಪಂಗ್ರಿ ಕುಟೆ ಗ್ರಾಮದಲ್ಲಿ ಮೌನ ಆವರಿಸಿದೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.