ಬೇರಿನಾಗ್ (ಉತ್ತರಾಖಂಡ): ಕಾರೊಂದು ನೂರು ಅಡಿಯ ಕಂದಕಕ್ಕೆ ಬಿದ್ದು, ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸಾವನ್ನಪ್ಪಿರುವ ಉತ್ತರಾಖಂಡನ ಪಿತೋರಗಢ ಜಿಲ್ಲೆಯ ಬೇರಿನಾಗ್ ಘಾಟ್ನಲ್ಲಿ ನಡೆದಿದೆ. ಮೃತರು ಕುಟುಂಬದ ಸಮೇತವಾಗಿ ಪೂಜಾ ಕಾರ್ಯಕ್ರಮಕ್ಕೆ ಹೊಗಿ ಮರಳಿ ಬರುತ್ತಿದ್ದರು.
ಇಂದು ಬೆಳಗ್ಗೆ ಚಂದನ್ ಸಿಂಗ್ ಎಂಬುವರ ಕುಟುಂಬಸ್ಥರು ಬಾಸೆದಾ ಗ್ರಾಮದಲ್ಲಿ ಪೂಜೆ ಮುಗಿಸಿ ಕಾರಿನಲ್ಲಿ ಬಾಗೇಶ್ವರ ಕಡೆಗೆ ಹೋಗುತ್ತಿದ್ದರು. ಈ ವೇಳೆ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಪಾಮ್ತೋಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ನೂರು ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಇದನ್ನು ಕಂಡ ಇಬ್ಬರು ಯುವಕರು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಕೂಡ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಆದರೆ, ಅಷ್ಟರಲ್ಲೇ ಚಂದನ್ ಸಿಂಗ್ ಪತ್ನಿ ತುಳಸಿ ದೇವಿ, ಹಿರಿಯ ಮತ್ತು ಕಿರಿಯ ಸಹೋದರರ ಪತ್ನಿಯರು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ವತಃ ಕಾರು ಚಲಾಯಿಸುತ್ತಿದ್ದ ಚಂದನ್ ಸಿಂಗ್ ಮತ್ತು ಈತನ ತಾಯಿ ದೇವಕಿ ದೇವಿ ಹಾಗೂ ಕಿರಿಯ ಸಹೋದರ ಗೋವಿಂದ್ ಸಿಂಗ್ ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ತಾಯಿ ದೇವಕಿ ದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಧಾರ್ಮಿಕ ಉತ್ಸವದಲ್ಲಿ ಉಸಿರುಗಟ್ಟಿ ನಾಲ್ವರು ಭಕ್ತರ ಸಾವು