ಅಮರಾವತಿ : ಅಶಿಸ್ತು ತೋರಿದ ಆರೋಪ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ವಿಧಾನಸಭೆಯಿಂದ ಬಜೆಟ್ ಅಧಿವೇಶನದ ಉಳಿದ ಭಾಗಕ್ಕೆ ವಿರೋಧ ಪಕ್ಷವಾದ ಟಿಡಿಪಿಯ ನಾಲ್ವರು ಶಾಸಕರನ್ನು ಅಮಾನತು ಮಾಡಲಾಗಿದೆ.
ಶಾಸಕರ ಅಶಿಸ್ತಿನ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಸ್ಪೀಕರ್ ತಮ್ಮಿನೇನಿ ಸೀತಾರಾಂ ಅವರು ನಾಲ್ವರು ಶಾಸಕರನ್ನು ಅಮಾನತುಗೊಳಿಸಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ಜಂಗಾರೆಡ್ಡಿಗುಡೆಂ ಪಟ್ಟಣದಲ್ಲಿ ನಕಲಿ ಮದ್ಯ ಸೇವನೆಯಿಂದ ಸಂಭವಿಸಿದ ಸಾವುಗಳ ಕುರಿತು ಚರ್ಚೆಗೆ ಒತ್ತಾಯಿಸಿ ಟಿಡಿಪಿ ಸದಸ್ಯರು ಸದನದಲ್ಲಿ ಗದ್ದಲ ಸೃಷ್ಟಿಸಿದರು. ಸದನವು ದಿನದ ಮಟ್ಟಿಗೆ ಸಭೆ ಸೇರುತ್ತಿದ್ದಂತೆಯೇ ಪ್ರತಿಪಕ್ಷದ ಶಾಸಕರು ಈ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು.
ಸಿಎಂ ಜಗನ್ ಅವರು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿ ಹೇಳಿಕೆ ನೀಡಿದ ನಂತರ ಕಳೆದ ವಾರ ಸಮಸ್ಯೆಯನ್ನು ಅಲ್ಲಿಗೆ ಅಂತ್ಯಗೊಳಿಸಲಾಗಿತ್ತು ಎಂಬ ಕಾರಣಕ್ಕಾಗಿ ಸ್ಪೀಕರ್ ಅವರು ಮುಂದೂಡಿಕೆ ಸೂಚನೆಯನ್ನು ತಿರಸ್ಕರಿಸಿದ್ದರು. ನಕಲಿ ಮದ್ಯ ಸೇವಿಸಿ ಸಾವುಗಳ ಪ್ರಕರಣವನ್ನು ಸಾಮಾನ್ಯ ಸಾವು ಎಂದು ಬಣ್ಣಿಸುವ ಮೂಲಕ ಸರ್ಕಾರ ಸತ್ಯವನ್ನು ಮರೆಮಾಚುತ್ತಿದೆ ಎಂದು ಆರೋಪಿಸಿದ ಟಿಡಿಪಿ ಸದಸ್ಯರು, ಈ ಬಗ್ಗೆ ಚರ್ಚೆಗೆ ಒತ್ತಾಯಿಸಿದರು. ಸದನದಲ್ಲಿ ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಘೋಷಣೆಗಳನ್ನು ಕೂಗಿದರು.
ಶಿಳ್ಳೆ ಊದಿದ ಕೆಲ ಟಿಡಿಪಿ ಸದಸ್ಯರಿಗೆ ಸ್ಪೀಕರ್ ಎಚ್ಚರಿಕೆ ನೀಡಿದರು. ತಮ್ಮ ಅಶಿಸ್ತಿನ ವರ್ತನೆಯ ಮೂಲಕ ಸದನಕ್ಕೆ ಅಪಖ್ಯಾತಿ ತರುತ್ತಿದ್ದಾರೆಂದು ಟಿಡಿಪಿಯ ನಾಲ್ವರು ಶಾಸಕರನ್ನು ಅಮಾನತು ಮಾಡುವ ಆದೇಶ ಮಾಡಿದ್ರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಮಾನತಾದ ಶಾಸಕರು, ಸರ್ಕಾರವು ತಮ್ಮನ್ನು ಅಮಾನತುಗೊಳಿಸುವ ಮೂಲಕ ಪ್ರತಿಪಕ್ಷಗಳ ಧ್ವನಿಗೆ ಮೂಗುದಾರ ಹಾಕಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಎಲ್ಪಿಜಿ ಬೆಲೆ ಹೆಚ್ಚಳ ಬಿಜೆಪಿ ಸರ್ಕಾರದ ಮತ್ತೊಂದು ಉಡುಗೊರೆ: ಅಖಿಲೇಶ್ ಯಾದವ್ ಗರಂ