ಕರ್ನಾಲ್(ಹರಿಯಾಣ): ಶಂಕಿತ ನಾಲ್ವರು ಭಯೋತ್ಪಾದಕರನ್ನು ಸ್ಫೋಟಕಗಳೊಂದಿಗೆ ಹರಿಯಾಣದ ಕರ್ನಾಲ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಶಂಕಿತ ಮೂವರು ಉಗ್ರರು ಪಂಜಾಬ್‌ನ ಫಿರೋಜ್‌ಪುರದವರು ಮತ್ತು ಓರ್ವ ಲುಧಿಯಾನದವನು. ಗುರುಪ್ರೀತ್, ಅಮನದೀಪ್, ಪರ್ಮಿಂದರ್ ಮತ್ತು ಭೂಪಿಂದರ್ ಆರೋಪಿಗಳೆಂದು ಗುರುತಿಸಲಾಗಿದೆ. ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.
ದೇಸಿ ಪಿಸ್ತೂಲ್, 31 ಜೀವಂತ ಮದ್ದುಗುಂಡುಗಳು, ಸ್ಫೋಟಕಗಳನ್ನು ಹೊಂದಿರುವ 3 ಕಬ್ಬಿಣದ ಕಂಟೈನರ್ ಮತ್ತು ಸುಮಾರು 1.3 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಮಗೆ ಖಚಿತ ಮಾಹಿತಿ ಸಿಕ್ಕಿದ ತಕ್ಷಣ, ನಾವು ಅದರ ಮೇಲೆ ಕಾರ್ಯಾಚರಣೆ ನಡೆಸಿದ್ದೇವೆ ಮತ್ತು ನಮ್ಮ ತಂಡವನ್ನು ಅಲರ್ಟ್ ಮಾಡಿದ್ದೇವೆ. ವಾಹನದ ನಂಬರ್ನಲ್ಲಿ ಮೇಲೆ 'ಡಿಎಲ್' ಇದೆ. ಆದರೆ, ವಾಹನದ ಮಾಲೀಕರ ಬಗ್ಗೆ ಇನ್ನೂ ತಿಳಿದಿಲ್ಲ. ಬಸ್ತಾರಾ ಟೋಲ್ ಬಳಿ ಶಂಕಿತರನ್ನು ಬಂಧಿಸಲಾಗಿದೆ ಎಂದು ಕರ್ನಾಲ್ ಎಸ್ಪಿ ರಾಮ್ ಪೂನಿಯಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಿಹಾರ ಸುಧಾರಣೆಗೋಸ್ಕರ 3 ಸಾವಿರ ಕಿ.ಮೀ ಪಾದಯಾತ್ರೆ: ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಘೋಷಣೆ
ಆರೋಪಿಗಳು ಪಾಕಿಸ್ತಾನ ಮೂಲದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದು, ತೆಲಂಗಾಣದ ಆದಿಲಾಬಾದ್ಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಪಾಕಿಸ್ತಾನ ಮೂಲದ ಹರ್ವಿಂದರ್ ಸಿಂಗ್ ಎಂಬಾತ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಈಗಾಗಲೇ ಎರಡು ಸರಕುಗಳನ್ನು ಕಳುಹಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.