ಭದ್ರಾದ್ರಿ ಕೊತ್ತಗುಡೆಂ: ಜಿಲ್ಲೆಯ ಇಲ್ಲೇಂದು ತಾಲೂಕಿನ ಕೋಟಿಲಿಂಗ ಬಳಿಯ ತಿರುವಿನಲ್ಲಿ ಶುಕ್ರವಾರ ರಾತ್ರಿ 10:30ಕ್ಕೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆ ದಾಖಲಿಸಲಾಗಿದೆ. ಮೃತರು ವಾರಂಗಲ್ ಜಿಲ್ಲೆಯ ರಾಮು (33), ಕಲ್ಯಾಣ್ (34), ಶಿವ (33), ಮತ್ತು ಹನುಮಕೊಂಡ ಜಿಲ್ಲೆಯ ಕಮಲಾಪುರದ ಬಾಷಾಬತ್ತುಲ ಅರವಿಂದ್ (20) ಎಂದು ಗುರತಿಸಲಾಗಿದೆ.
ಪೊಲೀಸರು ಮತ್ತು ಸ್ಥಳೀಯರ ವಿವರಗಳ ಪ್ರಕಾರ, ರಾಮು, ಕಲ್ಯಾಣ್, ಶಿವ , ರಣಧೀರ್ ಮತ್ತು ಹನುಮಕೊಂಡ ಜಿಲ್ಲೆಯ ಕಮಲಾಪುರದ ಬಾಷಾಬತ್ತುಲ ಅರವಿಂದ್ ಸೇರಿದಂತೆ ಐವರು ಭದ್ರಾದ್ರಿ ಜಿಲ್ಲೆಯ ಬರ್ಗಂಪಾಡು ತಾಲೂಕಿನ ಮೋತೆ ಗ್ರಾಮಕ್ಕೆ ವೆಡ್ಡಿಂಗ್ ಶೂಟ್ಗಾಗಿ ತೆರಳುತ್ತಿದ್ದರು. ಕೋಟಿಲಿಂಗ ಗ್ರಾಮದ ತಿರುವಿನಲ್ಲಿ ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಲಾರಿ ಮತ್ತು ಕಾರು ಮಧ್ಯೆ ಸಂಭವಿಸಿದ್ದ ಅಪಘಾತದಲ್ಲಿ ಕಾರಿನಲ್ಲಿದ್ದ ರಾಮು, ಕಲ್ಯಾಣ್, ಶಿವ ಎಂಬ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅರವಿಂದ್ ಮತ್ತು ರಣಧೀರ್ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತವನ್ನು ನೋಡಿದ ಸ್ಥಳೀಯರು ಸಹಾಯಕ್ಕೇ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡರು. ಬಳಿಕ ಪೊಲೀಸರಿಗೆ ಮಾಹಿತಿ ರವಾನಿಸಿದರು.
ಸ್ಥಳೀಯರ ರಕ್ಷಣಾ ಕಾರ್ಯದೊಂದಿಗೆ ಕೈ ಜೋಡಿಸಿದ ಪೊಲೀಸರು ಗಾಯಾಳುಗಳನ್ನು ಇಲ್ಲೇಂದು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅರವಿಂದ್ ಮೃತಪಟ್ಟಿದ್ದಾರೆ. ವಾರಂಗಲ್ ಜಿಲ್ಲೆಯ ನರಸಂಪೇಟೆಯ ರಣಧೀರ್ ಸ್ಥಿತಿ ಚಿಂತಾಜನಕವಾಗಿದೆ. ಉತ್ತಮ ಚಿಕಿತ್ಸೆಗಾಗಿ ಅವರನ್ನು ಖಮ್ಮಂಗೆ ರವಾನಿಸಲಾಗಿದೆ.
ಇನ್ನು ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಬಳಿಕ ಕುಟುಂಬಸ್ಥರನ್ನ ಸಂಪರ್ಕಿಸಲಾಗಿದ್ದು, ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದಾಕ್ಷಣ ಮೃತರ ಮತ್ತು ಗಾಯಾಳು ಪೋಷಕರು ಹಾಗೂ ಸಂಬಂಧಿಗಳು ಆಸ್ಪತ್ರೆಯತ್ತ ದೌಡಾಯಿಸುತ್ತಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಪೋಷಕರ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಲಭ್ಯವಾಗಬೇಕಿದೆ.
ಕಾಶ್ಮೀರದಲ್ಲಿ ಎಂಎಲ್ಎ ಮನೆ ಮೇಲೆ ಗುಂಡಿನ ದಾಳಿ: ಲಸ್ಸಾನ ಗ್ರಾಮದ ಮಾಜಿ ಶಾಸಕ ಶ.ಚ ಮೊಹಮ್ಮದ್ ಅಕ್ರಮ್ (Surankote Sh Ch Mohd Akram) ಅವರ ಮನೆಯ ಮೇಲೆ ಕೆಲವು ಅಪರಿಚಿತ ವ್ಯಕ್ತಿಗಳು 12 ಬೋರ್ ರೈಫಲ್‌ನಿಂದ ಗುಂಡು ಹಾರಿಸಿದ್ದಾರೆ. ಪರಿಣಾಮ ಮನೆಯ ಗೋಡೆಯ ಮೇಲೆ ಬೀದಿದೀಪವೊಂದು ಬಿದ್ದಿದೆ. ಗುಂಡಿನ ದಾಳಿಯಿಂದಾಗಿ ಗೋಡೆ ಬಿರುಕು ಬಿಟ್ಟಿರುವ ಗುರುತು ಕಂಡು ಬಂದಿವೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ದುಷ್ಕರ್ಮಿಗಳು 12-ಬೋರ್ ರೈಫಲ್‌ನಿಂದ ಗುಂಡಿನ ದಾಳಿ ನಡೆಸಿದ್ದು, ಗೋಡೆಯ ಮೇಲೆ ಸ್ಪ್ಲಿಂಟರ್ ಗುರುತುಗಳು ಉಂಟಾಗಿವೆ ಎಂದು ಪ್ರಾಥಮಿಕ ತನಿಖೆಗಳ ಮೂಲಕ ತಿಳಿದುಬಂದಿವೆ. ಹೆಚ್ಚಿನ ತನಿಖೆ ನಡೆಯುತ್ತಿವೆ. ಘಟನೆಯಲ್ಲಿ ಸಾವು-ನೋವು ಸಂಭವಿಸಿಲ್ಲ. ಆದ್ರೆ ಸ್ಥಳೀಯರಲ್ಲಿ ಭಯದ ವಾತಾವರಣ ಮೂಡಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.