ನೂಹ್ (ಹರಿಯಾಣ): ಒಂದೇ ಕುಟುಂಬದ ಮೂವರು ಪುಟ್ಟ ಮಕ್ಕಳ ಹಾಗೂ ಓರ್ವ ವ್ಯಕ್ತಿ ಸೇರಿದಂತೆ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಹರಿಯಾಣದ ನೂಹ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಈ ಘಟನೆಯ ಬಳಿಕ ಮೃತ ವ್ಯಕ್ತಿಯ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಒಟ್ಟಿಗೆ ನಾಲ್ವರು ಸಾವನ್ನಪ್ಪಿರುವುದರ ಹಿಂದೆ ಈಕೆಯ ಕೈವಾಡ ಇರುವ ಸಂಶಯ ವ್ಯಕ್ತವಾಗಿದೆ.
ಇಲ್ಲಿನ ಗಂಗೊಳ್ಳಿ ಗ್ರಾಮದ ಮನೆಯೊಂದರಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು 38 ವರ್ಷದ ಜಿತನ್ ಹಾಗೂ ಈತನ ಮಕ್ಕಳಾದ 12 ಹಾಗೂ 8 ವರ್ಷದ ಪುತ್ರರು ಮತ್ತು 10 ವರ್ಷದ ಪುತ್ರಿ ಎಂದು ಗುರುತಿಸಲಾಗಿದೆ. ನಾಲ್ವರ ಶವಗಳು ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇಂದು ಬೆಳಗ್ಗೆ ಗ್ರಾಮಸ್ಥರು ಗಮನಿಸಿದ ನಂತರ ಈ ದುರಂತ ಬಯಲಿಗೆ ಬಂದಿದೆ.
ಇದನ್ನೂ ಓದಿ: ಪ್ರೀತಿ ಹೆಸರಲ್ಲಿ ವಂಚನೆ, ಮದುವೆ ಹೆಸರಲ್ಲಿ 3 ತಿಂಗಳಿನಿಂದ ಸಾಮೂಹಿಕ ಅತ್ಯಾಚಾರ.. ಆರೋಪಿಗಳನ್ನು ಬಂಧಿಸಿದ ಪೊಲೀಸರು
ಸದ್ಯಕ್ಕೆ ಇವರ ಸಾವಿಗೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ. ಆದರೆ, ಗ್ರಾಮಸ್ಥರ ಮಾಹಿತಿ ಪ್ರಕಾರ, ವಿಷ ಸೇವನೆಯಿಂದ ತಂದೆ ಹಾಗೂ ಮಕ್ಕಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಜಿತನ್ ಪತ್ನಿಯೇ ಈ ಸಾವುಗಳಿಗೆ ಕಾರಣ. ಈ ಮಹಿಳೆ ತನ್ನ ಪತಿ ಮತ್ತು ಮೂವರು ಮಕ್ಕಳಿಗೆ ವಿಷಕಾರಿ ಪದಾರ್ಥವನ್ನು ನೀಡಿದ್ದಾಳೆ. ಇದರಿಂದ ಮಕ್ಕಳು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಈ ಘಟನೆ ಬೆಳಕಿಗೆ ಬಂದ ಬಳಿಕ ಈ ಮಹಿಳೆ ತಲೆಮರೆಸಿಕೊಂಡಿದ್ದಾಳೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪೊಲೀಸರ ಭೇಟಿ, ಪರಿಶೀಲನೆ: ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ವಿಷಯ ತಿಳಿದ ತಕ್ಷಣವೇ ಗಂಗೊಳ್ಳಿ ಗ್ರಾಮಕ್ಕೆ ರೋಜ್‌ಕಮೇವ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದರು. ಅಲ್ಲದೇ, ನಾಲ್ವರ ಮೃತದೇಹಗಳನ್ನು ತಮ್ಮ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ನೂಹ್ ಪಟ್ಟಣದ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಕುರಿತು ಡಿಎಸ್ಪಿ ಜಿತೇಂದ್ರ ಕುಮಾರ್ ರಾಣಾ ಪ್ರತಿಕ್ರಿಯಿಸಿ, ತಂದೆ ಮತ್ತು ಮೂವರು ಮಕ್ಕಳ ಮೃತದೇಹಗಳು ಪತ್ತೆಯಾದ ಘಟನೆಯ ಮಾಹಿತಿ ಬಂದ ಕೂಡಲೇ ತಮ್ಮ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ವರದಿ ಹೊರಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮುಂದುವರೆದು ಅವರು, ಈ ಘಟನೆ ಬಗ್ಗೆ ಪೊಲೀಸರು ಯಾರಿಂದಲೂ ಇನ್ನೂ ಲಿಖಿತ ದೂರು ಸ್ವೀಕರಿಸಿಲ್ಲ. ಲಿಖಿತ ದೂರು ಸ್ವೀಕರಿಸಿದ ತಕ್ಷಣ ಅದರ ಆಧಾರದ ಮೇಲೆ ತನಿಖೆ ಕೈಗೊಂಡು ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Medical Student Suicide: ಪಾಟ್ನಾ ಏಮ್ಸ್ ಪಿಜಿ ವೈದ್ಯ ಆತ್ಮಹತ್ಯೆ..