ಮೋತಿಹಾರಿ(ಬಿಹಾರ): ಹೊಸದಾಗಿ ನಿರ್ಮಾಣ ಮಾಡಲಾಗಿದ್ದ ಶೌಚಾಲಯದ ತೊಟ್ಟಿಯಲ್ಲಿ ಬಿದ್ದ ಮಗುವಿನ ರಕ್ಷಣೆ ಮಾಡಲು ಹೋಗಿ ನಾಲ್ವರು ಸಾವನ್ನಪ್ಪಿರುವ ಘಟನೆ ಬಿಹಾರದ ಕೊತ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈಗಾಗಲೇ ಎಲ್ಲರ ಮೃತದೇಹ ಹೊರತೆಗೆಯಲಾಗಿದೆ.
ಮೃತರನ್ನ ರಾಜು ಪಂಡಿತ್, ಬಿಗು ಸಾಹ್, ರಾಹುಲ್ ಸಾಹ್ ಮತ್ತು ನಿರಂಜನ್ ಪಂಡಿತ್ ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಕೊತ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?
ಇಂದು ಸಂಜೆ ಅಮಿತ್ ಕುಮಾರ್ ಎಂಬ ಮಗು ಹೊಸದಾಗಿ ನಿರ್ಮಿಸಲಾಗಿದ್ದ ಶೌಚಾಲಯದ ಟ್ಯಾಂಕ್ನಲ್ಲಿ ಬಿದ್ದಿತ್ತು. ಆತನ ಹೊರತೆಗೆಯುವ ಉದ್ದೇಶದಿಂದ ನಾಲ್ವರು ಅದರೊಳಗೆ ಇಳಿದಿದ್ದಾರೆ. ಈ ವೇಳೆ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾರೆ.
ತಕ್ಷಣವೇ ಅವರನ್ನ ಹೊರತೆಗೆದು ಚಿಕಿತ್ಸೆಗೋಸ್ಕರ ಗ್ರಾಮೀಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಈಗಾಗಲೇ ಅವರು ಮೃತಪಟ್ಟಿದ್ದಾರೆಂದು ವೈದ್ಯರು ಘೋಷಣೆ ಮಾಡಿದ್ದಾರೆ. ಟ್ಯಾಂಕ್ನಲ್ಲಿ ಬಿದ್ದಿದ್ದ ಅಮಿತ್ ಕುಮಾರ್ನನ್ನ ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ಆತನಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿರಿ: ಪೊಲೀಸ್ ಸಮವಸ್ತ್ರ ಹಾಕಿ, ರಿವಾಲ್ವರ್ ತೋರಿಸಿ ಸಿನಿಮಾ ಡೈಲಾಗ್ ಹೊಡೆದ ಪೇದೆ!
ನಾಲ್ವರ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದ್ದು, ಘಟನೆ ನಡೆಯುತ್ತಿದ್ದಂತೆ ಮೃತ ಕುಟುಂಬಸ್ಥರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೊಸದಾಗಿ ನಿರ್ಮಾಣ ಮಾಡಲಾಗಿದ್ದ ಕಾರಣ ಶೌಚಾಲಯದ ತೊಟ್ಟಿಯ ಮೇಲಿನ ಮುಚ್ಚಳ ಹಾಕಿರಲಿಲ್ಲ ಎಂದು ತಿಳಿದು ಬಂದಿದೆ.