ಪಾಲಿ (ರಾಜಸ್ಥಾನ): ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಭಾರಿ ದುರಂತ ಸಂಭವಿಸಿದೆ. ಒಬ್ಬನೇ ಮಗ ಅನಾರೋಗ್ಯದಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರು ದುಡುಕಿನ ನಿರ್ಧಾರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಾಲಿ ಜಿಲ್ಲೆಯ ರೋಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂಝಿ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ. ಗ್ರಾಮದ ಭಲ್ಲರಾಮ್ ಮೇಘವಾಲ್ ಎಂಬುವವರ ಒಬ್ಬನೇ ಮಗನಾದ ಮೂರು ವರ್ಷದ ಭೀಮರಾವ್ ಎಂಬ ಬಾಲಕ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗ್ತಿದೆ. ಬುಧವಾರ ಮಧ್ಯಾಹ್ನ ಚಿಕಿತ್ಸೆಗೆಂದು ರೋಹತ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ, ಬಾಲಕ ಭೀಮರಾವ್ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.
ಇದರಿಂದ ಆಘಾತಗೊಂಡು ಗ್ರಾಮಕ್ಕೆ ವಾಪಸಾಗುವ ಮಾರ್ಗ ಮಧ್ಯೆಯೇ ಭಲ್ಲರಾಮ್ ಮತ್ತು ಪತ್ನಿ ಮೀರಾ, ಐದು ವರ್ಷದ ಮಗಳು ಸೇರಿದಂತೆ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆ ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಇನ್ನು, ಮೃತ ಭಲ್ಲರಾಮ್ ಮೇಘವಾಲ್ ಮನೆಯಲ್ಲಿದ್ದ ಐವರು ಕುಟುಂಬ ಸದಸ್ಯರಿದ್ದರು. ಈ ವೇಳೆ ಶಾಲೆಗೆ ಹೋಗಿದ್ದ ಎಂಟು ವರ್ಷದ ಬಾಲಕಿ ಮಾತ್ರ ಬದುಕುಳಿದಿದ್ದಾಳೆ.
ಇದನ್ನೂ ಓದಿ: ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಖಿನ್ನತೆ... ರಸ್ತೆಯಲ್ಲಿ ಕಾರು ನಿಲ್ಲಿಸಿ ಟೆಕ್ಕಿ ಆತ್ಮಹತ್ಯೆ