ನಾರಾಯಣಪುರ/ಛತ್ತೀಸ್ಗಢ: ಛತ್ತೀಸ್ಗಢದಲ್ಲಿ ಐಇಡಿ (ಸುಧಾರಿತ ಸ್ಫೋಟಕಗಳು) ಬಳಸಿ ವಾಹನಗಳನ್ನು ಜಖಂಗೊಳಿಸಿದ್ದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ನಕ್ಸಲರನ್ನು ನಾರಾಯಣಪುರ ಜಿಲ್ಲೆಯಲ್ಲಿ ಡಿಆರ್‌ಜಿ, ಎಸ್‌ಟಿಎಫ್ ಮತ್ತು ಐಟಿಬಿಪಿ ಸೈನಿಕರು ಬಂಧಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ದೇಶನದಲ್ಲಿ ಜಿಲ್ಲೆಯ ಅರಣ್ಯಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ), ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಯ ಸೈನಿಕರು ನಕ್ಸಲರನ್ನು ಬಂಧಿಸಿದ್ದಾರೆ.
ಬಂಧಿತ ನಕ್ಸಲರನ್ನು ಸೋನಾರು ಅಂಚ್ಲಾ (22), ಫಾಗು ರಾಮ್ ಅಂಚ್ಲಾ (35), ಸೋನು ರಾಮ್ ಅಂಚ್ಲಾ (45) ಮತ್ತು ಮಾಂಗ್ಟು ರಾಮ್ ಪೊಟೈ (35) ಎಂದು ಗುರುತಿಸಲಾಗಿದ್ದು, ಇವರು ಮಾವೋವಾದಿಗಳ 'ಜನತಾನ್ ಸರ್ಕಾರ್' ಗುಂಪಿನ ಸಕ್ರಿಯ ಸದಸ್ಯರಾಗಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತರಿಂದ ಭದ್ರತಾ ಪಡೆಗಳು ಲೋಡಿಂಗ್ ಗನ್, ಎರಡು ಡಿಟೋನೇಟರ್ ಮತ್ತು ವಿದ್ಯುತ್ ತಂತಿಗಳನ್ನು ಸಹ ವಶಪಡಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.