ಯಮುನಾ ನಗರ(ಹರಿಯಾಣ): ಗುಜರಿ ಸಾಮಗ್ರಿ ತುಂಬಿಟ್ಟಿದ್ದ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡು ಒಂದೇ ಕುಟುಂಬದ ನಾಲ್ವರು ಸಜೀವ ದಹನವಾದ ದುರ್ಘಟನೆ ಯಮುನಾನಗರ ಜಿಲ್ಲೆಯಲ್ಲಿ ನಡೆದಿದೆ.
ಯಮುನಾ ನಗರದಲ್ಲಿರುವ ಗುಜರಿ ಸಾಮಗ್ರಿಗಳನ್ನು ಸಂಗ್ರಹಿಸಲಾಗುತ್ತಿದ್ದ ಗೋದಾಮಿನಲ್ಲಿ ಬುಧವಾರ ರಾತ್ರಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕೆಲಸ ಮಾಡುತ್ತಿದ್ದ ಕುಟುಂಬಗಳ ಮನೆಗಳಿಗೂ ಬೆಂಕಿ ಆವರಿಸಿಕೊಂಡಿದೆ. ದುರ್ಘಟನೆಯಲ್ಲಿ ತಂದೆ ಮತ್ತು ಮೂವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಕುಟುಂಬದ ಮಹಿಳೆ ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಕಿ ಮತ್ತು ದಟ್ಟ ಹೊಗೆ ಆವರಿಸಿಕೊಂಡಿದ್ದರಿಂದ ಇನ್ನಷ್ಟು ಕುಟುಂಬಗಳು ಬೆಂಕಿಯ ಮಧ್ಯೆ ಸಿಲುಕಿದ್ದರು. ಇದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆಗಾಗಲೇ ಬೆಂಕಿ ಗೋದಾಮಿನಲ್ಲಿ ವ್ಯಾಪಕವಾಗಿ ಹಬ್ಬಿಕೊಂಡಿತ್ತು.
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹರಸಾಹಸಪಟ್ಟು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಆದರೆ, ಒಳಹೋಗಲು ಅಸಾಧ್ಯವಾದ ಕಾರಣ ಗೋದಾಮಿನ ಹಿಂದಿನ ಭಾಗದ ಗೋಡೆ ಒಡೆದು ಹಾಕಿ, ಒಳಗೆ ಸಿಲುಕಿದ್ದ 17 ಕಾರ್ಮಿಕರನ್ನು ರಕ್ಷಿಸಿದ್ದಾರೆ. ಅಲ್ಲದೇ, ದುರ್ಘಟನೆಯಲ್ಲಿ ಸುಟ್ಟುಹೋದ ನಾಲ್ವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.