ವಿಜಯವಾಡ(ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲೂ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಪ್ರತಿದಿನ ನೂರಾರು ಜನರು ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗುತ್ತಿದ್ದಾರೆ.
ಇದರ ಮಧ್ಯೆ ಡೆಡ್ಲಿ ವೈರಸ್ಗೆ ಒಂದೇ ಕುಟುಂಬದ ಅನೇಕರು ಸಾವನ್ನಪ್ಪುತ್ತಿರುವುದು ವರದಿ ಆಗುತ್ತಿವೆ. ಇದೀಗ ಆಂಧ್ರಪ್ರದೇಶದಲ್ಲೂ ಇಂತಹದೊಂದು ಘಟನೆ ನಡೆದಿದೆ. ವಿಜಯವಾಡದಲ್ಲಿ ವಕೀಲ ಕುಟುಂಬದ ನಾಲ್ವರು ಸದಸ್ಯರು ಸಾವನ್ನಪ್ಪಿದ್ದಾರೆ. ಕೇವಲ ಮೂರು ದಿನಗಳಲ್ಲಿ ತಾಯಿ, ತಂದೆ, ವಕೀಲ ಮಗ ಹಾಗೂ ಚಿಕ್ಕಪ್ಪ ಕೂಡ ಸಾವನ್ನಪ್ಪಿದ್ದಾರೆ.
ಸಾಂಕ್ರಾಮಿಕ ರೋಗದಿಂದಾಗಿ ವಕೀಲ ದಿನೇಶ್ ಅವರ ತಂದೆ ಮಂಗಳವಾರ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಅದೇ ದಿನ ಮಧ್ಯಾಹ್ನ ದಿನೇಶ್ ಕೂಡ ನಿಧನರಾಗಿದ್ದು, ನಂತರ ಅವರ ತಾಯಿ ಹಾಗೂ ಚಿಕ್ಕಪ್ಪ ಕೂಡ ಸಾವನ್ನಪ್ಪಿದ್ದಾರೆ. ಸಾವಿನ ಸುದ್ದಿಯಿಂದಾಗಿ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.