ಬರೇಲಿ(ಉತ್ತರ ಪ್ರದೇಶ): ಬರೇಲಿಯದ ಅಶೋಕ ಫೋಮ್ ಫ್ಯಾಕ್ಟರಿಯಲ್ಲಿ ಬುಧವಾರ ತಡರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಪರಿಣಾಮ ಫ್ಯಾಕ್ಟರಿಯ ಒಳಗಿದ್ದ ನಾಲ್ವರು ಕಾರ್ಮಿಕರು ಸಜೀವ ದಹನವಾಗಿದ್ದು, ಆರು ಮಂದಿ ಕಾರ್ಮಿಕರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಗಾಯಗೊಂಡ ಎಲ್ಲರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಕಿಗೆ ತುತ್ತಾದ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ಘಟನ ಸ್ಥಳಕ್ಕೆ ತಕ್ಷಣವೇ 5 ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ನಾಲ್ವರ ಪ್ರಾಣಪಕ್ಷಿ ಹಾರಿಹೋಗಿದೆ. ತನಿಖೆ ನಡೆಯುತ್ತಿದ್ದು, ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನೆಂಬುದು ಇನ್ನೂ ತಿಳಿದು ಬಂದಿಲ್ಲ.
ಬರೇಲಿಯ ಲಕ್ನೋ ಹೆದ್ದಾರಿಯ ಬದಿಯಲ್ಲಿ ಅಶೋಕ ಫೋಮ್ ಫ್ಯಾಕ್ಟರಿ ಇದೆ. ಇದರಲ್ಲಿ ಹಾಸಿಗೆಗಳ ಫೋಮ್ ತಯಾರಿಸಲಾಗುತ್ತದೆ. ಬುಧವಾರ ರಾತ್ರಿ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ಭಾರೀ ಸ್ಫೋಟಗಳು ಸಂಭವಿಸಿವೆ. ಬೆಂಕಿ ಹೊತ್ತಿಕೊಂಡಾಗ ಕಾರ್ಖಾನೆಯೊಳಗೆ ಸುಮಾರು 50 ಕಾರ್ಮಿಕರು ಇದ್ದರು. ಮಾಹಿತಿ ತಿಳಿದ ಅಗ್ನಿಶಾಮಕ ದಳದ ಐದು ವಾಹನಗಳ ಸಹಾಯದಿಂದ ಬೆಂಕಿ ನಂದಿಸಲಾಯಿತು. ಆದರೆ ಬೆಂಕಿ ನಂದಿಸುವಷ್ಟರಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ.
ಇದನ್ನೂ ಓದಿ: 6 ವರ್ಷದಲ್ಲಿ 38 ಬಾಲಕಿಯರ ಮೇಲೆ ಅತ್ಯಾಚಾರ; ಕೊಲೆ ಆರೋಪಿಗೆ ಶಿಕ್ಷೆ!
ರಕ್ಷಣಾ ಕಾರ್ಯಾಚರಣೆ ವೇಳೆ ನಾಲ್ವರು ಕಾರ್ಮಿಕರ ಸುಟ್ಟು ಕರಕಲಾದ ಮೃತದೇಹವನ್ನು ಹೊರತೆಗೆಯಲಾಯಿತು. ಇದಲ್ಲದೆ, ಬೆಂಕಿಗೆ ತುತ್ತಾಗಿದ್ದ ಇತರ ಆರು ಕಾರ್ಮಿಕರನ್ನು ತರಾತುರಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಕಾರ್ಖಾನೆಯಲ್ಲಿ ಬೆಂಕಿಯ ಜ್ವಾಲೆ ಎಷ್ಟರ ಮಟ್ಟಿಗೆ ಇತ್ತೆಂದರೆ ಕಾರ್ಖಾನೆಯ ಕಟ್ಟಡದ ಮೇಲ್ಛಾವಣಿ ಕೂಡ ಕರಗಿದೆ. ದೀಮ್ ಶಿವಕಾಂತ್ ದ್ವಿವೇದಿ ಹಾಗೂ ಎಸ್‌ಎಸ್‌ಪಿ ಪ್ರಭಾಕರ ಚೌಧರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡಿರುವುದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ದೀಮ್ ಶಿವಕಾಂತ್ ದ್ವಿವೇದಿ ತಿಳಿಸಿದ್ದಾರೆ. ಬೆಂಕಿಯನ್ನು ಹತೋಟಿಗೆ ತರಲಾಗಿದ್ದು, ಅವಘಡದಲ್ಲಿ ನಾಲ್ವರು ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಆರು ಜನ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ಬೆಂಕಿ ಅವಘಡದಲ್ಲಿ ಗಾಯಗೊಂಡಿರುವ ಕೂಲಿ ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡಿರುವುದಕ್ಕೆ ಕಾರಣ ಏನು ಎಂಬುದರ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಐವರು ಶಾಲಾ ಮಕ್ಕಳ ಮೇಲೆ ಹರಿದ ಕಾರ್; ಸ್ಥಳದಲ್ಲೇ ಮೂವರು ಸಾವು..!
ಇದನ್ನೂ ಓದಿ: ಕೇರಳ ವೈದ್ಯೆ ಕೊಂದ ಕುಡುಕ ಹಂತಕನಿಗೆ 14 ದಿನ ನ್ಯಾಯಾಂಗ ಬಂಧನ, ಕೊಲೆ ಕಾರಣ ನಿಗೂಢ