ಕಾಕಿನಾಡ(ಆಂಧ್ರಪ್ರದೇಶ): ಜಿಲ್ಲೆಯ ಪ್ರತ್ತಿಪಾಡು ತಾಲೂಕಿನ ಧರ್ಮಾವರಂ ಎಂಬಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಮಧ್ಯರಾತ್ರಿ ಸೀಗಡಿ ಕಂಟೈನರ್‌ಗೆ ಮರಳು ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ವಾಹನಗಳು ಬೆಂಕಿಗೆ ಆಹುತಿಯಾಗಿದ್ದು, ನಾಲ್ವರು ಸಜೀವ ದಹನವಾಗಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ವಿಶಾಖ ಕಡೆಗೆ ಹೋಗುತ್ತಿದ್ದ ಮರಳು ಲಾರಿ ರಸ್ತೆಯ ಡಿವೈಡರ್ ಡಿಕ್ಕಿ ಹೊಡೆದು ಎದುರಿನಿಂದ ಬರುತ್ತಿದ್ದ ಕಂಟೇನರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಕಂಟೈನರ್ನ ಡೀಸೆಲ್ ಟ್ಯಾಂಕ್ಗೆ ಲಾರಿ ನೇರವಾಗಿ ಡಿಕ್ಕಿ ಹೊಡೆದಿದ್ದರಿಂದ ಬೆಂಕಿ ಹೊತ್ತಿಕೊಂಡು ಈ ಅಪಘಾತ ಸಂಭವಿಸಿದೆ.
ಮೃತರು ಉತ್ತರ ಪ್ರದೇಶದ ಊಂಚಿಡ್ ಗ್ರಾಮದ ಕಂಟೈನರ್ ಚಾಲಕ ವಿನೋದಕುಮಾರ್ ರಾಧೇಶ್ಯಾಮ್ ಯಾದವ್ (27), ಭೀಮಾವರಂ ಜಿಲ್ಲೆಯ ಯನಮದುರ್ರು ಗ್ರಾಮದ ಮೇಲ್ವಿಚಾರಕ ಕಾಳಿ ಪೆದ್ದಿರಾಜು (45), ಮರಳು ಲಾರಿ ಚಾಲಕ ಕೃಷ್ಣಾ ಜಿಲ್ಲೆಯ ಕೋಡೂರು ತಾಲೂಕಿನ ಪಡವರಿಪಾಲೆಂ ಗ್ರಾಮದ ಜನ್ನು ಶ್ರೀನು (45) ಎಂದು ಗುರುತಿಸಲಾಗಿದೆ. ಈ ಮೂವರು ಸೇರಿದಂತೆ ಮತ್ತೊಬ್ಬರು ಅದೇ ವಾಹನದಲ್ಲಿ ಸಜೀವ ದಹನವಾಗಿದ್ದು, ಗುರುತು ಪತ್ತೆಯಾಗಿಲ್ಲ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ರಾತ್ರಿಯಿಡೀ ಬೆಂಕಿ ನಿಯಂತ್ರಿಸಲು ಶ್ರಮಿಸಿದರು. ಈ ಘಟನೆ ಕುರಿತು ಪ್ರತ್ತಿಪಾಡು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಓದಿ: ಆಕಸ್ಮಿಕ ಬೆಂಕಿ: ಮನೆಯಲ್ಲಿದ್ದ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳು ಸುಟ್ಟು ಭಸ್ಮ