ಲಖನೌ: ಅನಾರೋಗ್ಯದಿಂದ ಬಳಲುತ್ತಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಸ್ಥಿತಿ ಮತ್ತಷ್ಟು ಕ್ಷೀಣಿಸಿದೆ. ಲಖನೌ ಎಸ್‌ಜಿಪಿಜಿಐ ಹೊರಡಿಸಿದ ವೈದ್ಯಕೀಯ ಬುಲೆಟಿನ್ ಪ್ರಕಾರ, ಅವರ ಸ್ಥಿತಿ ಇದೀಗ ಅಸ್ಥಿರವಾಗಿದೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಇದೀಗ ಆ್ಯಂಟಿ ಬಯೋಟಿಕ್ ಮತ್ತು ಆ್ಯಂಟಿಫಂಗಲ್ ಔಷಧಗಳ ಚಿಕಿತ್ಸೆ ಆರಂಭಿಸಲಾಗಿದೆ. ನಿನ್ನೆ ಸಂಜೆಯಿಂದ ಅವರಿಗೆ ಆಮ್ಲಜನಕ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಯಲ್ಲಿ ಅವರ ಕುಟುಂಬಸ್ಥರು ಉಪಸ್ಥಿತರಿದ್ದಾರೆ.
ಶನಿವಾರ ಉಸಿರಾಟದ ಸಮಸ್ಯೆ ಕಂಡು ಬಂದಿದ್ದು, ಆನಂತರದಿಂದ ಆಮ್ಲಜನಕ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕ್ರಿಟಿಕಲ್ ಕೇರ್ ಮೆಡಿಸಿನ್, ನೆಫ್ರಾಲಜಿ, ನ್ಯೂರಾಲಜಿ, ಎಂಡೋಕ್ರೈನಾಲಜಿ ಮತ್ತು ಕಾರ್ಡಿಯಾಲಜಿ ವಿಭಾಗಗಳ ಹಿರಿಯ ವೈದ್ಯರ ತಂಡವು ಅವರ ಚಿಕಿತ್ಸೆ ನೋಡಿಕೊಳ್ಳುತ್ತಿದೆ.
ಲೋಹಿಯಾ ಸಂಸ್ಥೆಯಲ್ಲಿ ನಡೆದ ಪರೀಕ್ಷೆಯ ವೇಳೆ, ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುವುದು, ತೀವ್ರವಾದ ಬ್ಯಾಕ್ಟೀರಿಯಾದ ಸೋಂಕಿನ ಸಮಸ್ಯೆಗಳು ಪತ್ತೆಯಾಗಿದೆ. ದೇಹದಲ್ಲಿ ಉರಿಯೂತ ಮತ್ತು ಸೋಂಕು ಇದೆ. ಮೆದುಳಿಗೆ ಸಂಬಂಧಿಸಿದ ಸಿಟಿ ಸ್ಕ್ಯಾನ್‌ನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಂಡು ಬಂದಿದೆ.
ಕಲ್ಯಾಣ್ ಸಿಂಗ್ ಅವರ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಿರಂತರವಾಗಿ ನಿಗಾ ಇಡುತ್ತಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಕಲ್ಯಾಣ್ ಸಿಂಗ್ ಅವರ ಆರೋಗ್ಯದ ಬಗ್ಗೆ ನಿರಂತರವಾಗಿ ಮಾಹಿತಿ ತೆಗೆದುಕೊಳ್ಳುತ್ತಿದ್ದಾರೆ. ಸಿಎಂ ಯೋಗಿ ಸ್ವತಃ ಭಾನುವಾರ ಪಿಜಿಐ ಆಸ್ಪತ್ರೆಗೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.