ನವದೆಹಲಿ: ಕೇಂದ್ರದ ಮಾಜಿ ಗೃಹ ಸಚಿವ, ಜಲೋರ್-ಸಿರೋಹಿ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಬೂಟಾ ಸಿಂಗ್ ನಿಧನರಾಗಿದ್ದಾರೆ.
ದೆಹಲಿಯ ಏಮ್ಸ್ನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಎರಡು ತಿಂಗಳ ಹಿಂದೆ ಮೆದುಳಿನ ರಕ್ತಸ್ರಾವದಿಂದಾಗಿ ಅವರು ಏಮ್ಸ್ನ ತುರ್ತು ನಿಗಾ ಘಟಕಕ್ಕೆ ದಾಖಲಾಗಿದ್ದರು.
ಇಂದಿರಾಗಾಂಧಿ ಕ್ಯಾಬಿನೆಟ್‌ನಲ್ಲಿ ಸೇವೆ ಸಲ್ಲಿಸಿದ್ದ ಬೂಟಾ ಸಿಂಗ್, ಬಿಹಾರ ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅವರು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಪ್ರಧಾನಿ ಸಂತಾಪ: ಮಾಜಿ ಗೃಹಮಂತ್ರಿ ಬೂಟಾ ಸಿಂಗ್ ನಿಧನಕ್ಕೆ ಪ್ರಧಾನಿ ಸಂತಾಪ ಸೂಚಿಸಿದ್ದಾರೆ. ಬಡವರ ಏಳಿಗೆಗಾಗಿ ಮತ್ತು ಅವರ ಧ್ವನಿಯಾಗಿ ಕೆಲಸ ನಿರ್ವಹಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ದಯಪಾಲಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.