ಪುಣೆ(ಮಹಾರಾಷ್ಟ್ರ): ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಪಿ. ಬಿ. ಸಾವಂತ್ ವಯೋಸಹಜ ಕಾಯಿಲೆಯಿಂದ ಮರಣವನ್ನಪ್ಪಿದ್ದಾರೆ. ಪುಣೆಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದ ಅವರಿಗೆ 91 ವರ್ಷ ವಯಸ್ಸಾಗಿತ್ತು.
ಅವರ ಅಂತ್ಯಕ್ರಿಯೆಯನ್ನು ನಾಳೆ ಬೆಳಗ್ಗೆ ಬಾನೇರ್‌ನಲ್ಲಿ ನಡೆಸಲಾಗುವುದು. ಸಾವಂತ್ ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 1989ರಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು. ಮಾಜಿ ನ್ಯಾಯಮೂರ್ತಿ ಪಿ.ಬಿ.ಸಾವಂತ್ ಅವರು ಜೂನ್ 30, 1930ರಂದು ಜನಿಸಿದ್ದರು.
ಬಾಂಬೆ ವಿಶ್ವವಿದ್ಯಾಲಯದಿಂದ ಸಾವಂತ್ ಅವರು ಎಲ್‌ಎಲ್‌ಬಿ ಪದವಿ ಗಳಿಸಿದ ನಂತರ ಆರಂಭದಲ್ಲಿ ಮುಂಬೈ ಹೈಕೋರ್ಟ್‌ನಲ್ಲಿ ಮತ್ತು ನಂತರ ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿ ಅಭ್ಯಾಸ ಮಾಡಲು ಪ್ರಾರಂಭಿಸಿದರು. 1973ರಲ್ಲಿ ಅವರನ್ನು ಮುಂಬೈ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು.