ಪಾಟ್ನಾ (ಬಿಹಾರ) : ಬಿಹಾರದ ಮಾಜಿ ಸಚಿವರೊಬ್ಬರನ್ನು 'ಲೈಂಗಿಕ ಸುಲಿಗೆ'ಯಲ್ಲಿ ಸಿಲುಕಿಸಿ 2 ಲಕ್ಷ ರೂಪಾಯಿಗೆ ಬೇಡಿಕೆ ಇಡಲಾಗಿದ್ದು, ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮಾಜಿ ಸಚಿವರಿಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡುತ್ತಿದ್ದು, ಲಕ್ಷಾಂತರ ರೂಪಾಯಿ ಹಣ ನೀಡಲು ಒತ್ತಡ ಹೇರಲಾಗುತ್ತಿದೆ.
ಮಾಜಿ ಸಚಿವರನ್ನು ಬಲೆಗೆ ಕೆಡವಿದ್ದು ಹೀಗೆ: ಕೆಲ ದಿನಗಳ ಹಿಂದೆ ಮಾಜಿ ಸಚಿವರ ಫೇಸ್‌ಬುಕ್‌ನಲ್ಲಿ ಸೀಮಾ ಎಂಬ ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಅದನ್ನು ಅವರು ಒಪ್ಪಿಕೊಂಡಿದ್ದರು. ಇದಾದ ಬಳಿಕ ಇಬ್ಬರ ಮಧ್ಯೆ ಮೆಸೇಜ್, ಕರೆಗಳ ಮೂಲಕ ಸಂಭಾಷಣೆ ನಡೆದಿವೆ. ಒಂದು ದಿನ ಆ ಕಡೆಯಿಂದ ವಿಡಿಯೋ ಕಾಲ್ ಬಂದಿದೆ. ಕರೆ ಸ್ವೀಕರಿಸಿದ ಕೂಡಲೇ ಮೊಬೈಲ್ ಪರದೆಯ ಮೇಲೆ ಅಶ್ಲೀಲ ವಿಡಿಯೋ ಬಂದಿದೆ. ಅದನ್ನು ಮಾಜಿ ಸಚಿವರು ವೀಕ್ಷಿಸುತ್ತಿದ್ದಾಗ, ಸ್ಕ್ರೀನ್ಸೇವರ್ ಮಾಡಲಾಗಿದೆ.
ಇದನ್ನೇ ಬಳಸಿಕೊಂಡು ಮಾಜಿ ಸಚಿವರಿಗೆ ಕರೆ ಮಾಡಿದ ಅನಾಮಿಕ ಅಶ್ಲೀಲ ಚಿತ್ರ ವೀಕ್ಷಿಸುತ್ತಿರುವ ವಿಡಿಯೋ, ಚಿತ್ರಗಳನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಡಲು ಆರಂಭಿಸಿದ್ದಾರೆ. ಮೊದ ಮೊದಲು 20 ಸಾವಿರ ರೂಪಾಯಿ ಕೇಳಿದ ವ್ಯಕ್ತಿ, ಬಳಿಕ 2 ಲಕ್ಷ ನೀಡಲು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಇದರಿಂದ ಬೇಸತ್ತ ಮಾಜಿ ಸಚಿವರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಾಜಿ ಸಚಿವರು ಹೇಳೋದೇನು?: ನನಗೆ ಫೇಸ್‌ಬುಕ್‌ನಲ್ಲಿ ರಿಕ್ವೆಸ್ ಬಂದಾಗ ಅದನ್ನು ಸ್ವೀಕರಿಸಿದೆ. ಬಳಿಕ ಕರೆಗಳು ಬಂದವು. ಹೀಗಿದ್ದಾಗ ಮೊಬೈಲ್ಗೆ ವಿಡಿಯೋ ಕರೆ ಮಾಡಲಾಯಿತು. ಆಗ ಅಶ್ಲೀಲ ದೃಶ್ಯಗಳು ಬಂದವು. ಆಗ ನಾನು ತಕ್ಷಣವೇ ವಿಡಿಯೋ ಕರೆಯನ್ನು ಕಟ್ ಮಾಡಿದೆ. ಆದರೆ, ಅವರು ವಿಡಿಯೋ ರೆಕಾರ್ಡ್ ಮಾಡಿ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದರು ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ದೂರಿದ್ದಾರೆ.
ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು, ಎರಡು ಮೊಬೈಲ್ ಸಂಖ್ಯೆಗಳು ಮತ್ತು ಫೇಸ್‌ಬುಕ್ ಖಾತೆಯ ಮೇಲೆ ನಿಗಾ ಇಡಲಾಗಿದೆ. ಫ್ರೆಂಡ್ ರಿಕ್ವೆಸ್ಟ್ ಬಂದಿರುವ ಖಾತೆ ನಕಲಿಯಾಗಿದೆ. ಜನರು ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್ ಅನ್ನು ಸ್ವೀಕರಿಸುವ ಮೊದಲು ಯೋಚಿಸಬೇಕು. ಇಲ್ಲವಾದಲ್ಲಿ ಇಂತಹ ಸಮಸ್ಯೆಗೆ ಒಳಗಾಗಬೇಕಾಗುತ್ತದೆ ಎಂದು ಸೈಬರ್ ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕೇರಳದ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ : ಆರೋಪಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ ಎನ್ಐಎ