ನವದೆಹಲಿ: ಎಂಟು ವರ್ಷದ ಹಿಂದಿನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಅಮ್ರಪಾಲಿ ಗ್ರೂಪ್ನ ಮ್ಯಾನೇಜಿಂಗ್ ಡೈರೆಕ್ಟರ್(ಎಂಡಿ) ಅನಿಲ್ ಶರ್ಮಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಿಹಾರ ಮೂಲಕದ ಶಿಕ್ಷಣ ಸಂಸ್ಥೆಯಾದ ಬಾಲಿಕಾ ವಿದ್ಯಾಪೀಠದ ಮಾಜಿ ಕಾರ್ಯದರ್ಶಿ ಶರದ್ ಚಂದ್ ಹತ್ಯೆ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳು ಪಾಟ್ನಾ ಹೈಕೋರ್ಟ್ ನೀಡಿದ ಆದೇಶನ್ವಯ ಸಿಬಿಐ ತನಿಖೆ ಚುರುಕುಗೊಳಿಸಿದೆ. ಬಿಹಾರದ ಲಖಿಸರೈ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ದೂರು ದಾಖಲಾಗಿತ್ತು.
ಆರೋಪಿ ಅನಿಲ್ ಶರ್ಮಾ ಅವರು ಬ್ಯಾಂಕ್ ವಂಚನೆ ಪ್ರಕರಣಗಳನ್ನು ಎದುರಿಸುತ್ತಿದ್ದು, ಇದೀಗ ಹತ್ಯೆ ಪ್ರಕರಣದ ಆರೋಪದಲ್ಲೂ ಹೆಸರು ಕೇಳಿಬಂದಿದೆ. ಶರ್ಮಾ ಜೊತೆಗೆ ಲಖೀಸರೈ ಮೂಲದ ಪ್ರವೀಣ್ ಸಿನ್ಹಾ, ಶ್ಯಾಮ್ ಸುಂದರ್ ಪ್ರಸಾದ್, ರಾಜೇಂದ್ರ ಸಿಂಗಾನಿಯಾ, ಶಂಭು ಶರಣ್ ಸಿಂಗ್ ಮತ್ತು ಬಾಲಿಕಾ ವಿದ್ಯಾಪೀಠದ ಅನಿತಾ ಸಿಂಗ್ ಅವರನ್ನು ಸಿಬಿಐ ದಾಖಲಿಸಿಕೊಂಡ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ.
ದಿನಪತ್ರಿಕೆ ಓದುತ್ತಿದ್ದಾಗ ಹತ್ಯೆ: 2014ರ ಆಗಸ್ಟ್ 2ರಂದು ಬೆಳಗ್ಗೆ 6.30ರ ಸುಮಾರಿಗೆ ತಮ್ಮ ಮನೆಯ ಆವರಣದಲ್ಲಿ ದಿನ ಪತ್ರಿಕೆ ಓದುತ್ತಿದ್ದಾಗ ಶರದ್ ಚಂದ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಶಿಕ್ಷಣ ಸಂಸ್ಥೆಯ ಭೂಮಿ ಮತ್ತು ಇತರೆ ಆಸ್ತಿಗಳನ್ನು ಕಬಳಿಸಲು ಈ ಹತ್ಯೆ ನಡೆದಿತ್ತು ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ರಾಜೇಂದ್ರ ಪ್ರಸಾದ್ ಸಿಂಗಾನಿಯಾ, ಡಾ.ಪ್ರವೀಣ್ ಕುಮಾರ್ ಸಿನ್ಹಾ, ಶ್ಯಾಮ್ ಸಿಂದರ್ ಪ್ರಸಾದ್, ಶಂಭು ಶರಣ್ ಸಿಂಗ್ ಸಹಾಯದಿಂದ ಅಮ್ರಪಾಲಿ ಗ್ರೂಪ್ ಎಂಡಿ ಅನಿಲ್ ಶರ್ಮಾ 2009ರಲ್ಲಿ ಬಾಲಿಕಾ ವಿದ್ಯಾಪೀಠವನ್ನು ಬಲವಂತವಾಗಿ ಕಿತ್ತುಕೊಂಡಿದ್ದರು ಎಂಬ ಗಂಭೀರ ಆರೋಪವಿದೆ.
ಬಲವಂತವಾಗಿ ಸಂಸ್ಥೆಯ ಆಸ್ತಿ ವಶಕ್ಕೆ ಪಡೆದ ಆರೋಪ: ಸಿನ್ಹಾ ಮತ್ತು ಸಿಂಗ್ ಅವರಿಂದ ಕಾರ್ಯ ನಿರ್ವಹಿಸಲ್ಪಡುತ್ತಿದ್ದ ಬಾಲಿಕಾ ವಿದ್ಯಾಪೀಠದ ಖಾತೆಯನ್ನು ಕಿತ್ತುಕೊಳ್ಳಲಾಗಿತ್ತು. ಸಂಸ್ಥೆಯಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ಕಾರ್ಯಗಳ ಕುರಿತು ದೂರು ಕೂಡ ದಾಖಲಿಸಲಾಗಿತ್ತು. ಈ ವೇಳೆ ಮೃತರಿಗೆ ಸದಾ ಬೆದರಿಕೆ ಒಡ್ಡಲಾಗುತ್ತಿತ್ತು. ಅವರ ಮನೆಗೂ ಕೂಡ ಈ ಹಿಂದೆ ಹಾನಿ ಮಾಡಲಾಗಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಪ್ರಕರಣದ ಕುರಿತು ರಾಜ್ಯ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಚಂದ್ ಅವರ ಹೆಂಡತಿ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಬಿಹಾರದ ಸಿಐಡಿ ಪೊಲೀಸರು ಪ್ರಕರಣದಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ ಎಂದು ಹೈಕೋರ್ಟ್ಗೆ ಮಾಹಿತಿ ನೀಡಿದ್ದರು. ರಿಟ್ ಅರ್ಜಿಯಲ್ಲಿ ಲಭ್ಯವಿರುವ ಅಂಶಗಳನುಸಾರ, ಇಷ್ಟು ವರ್ಷಗಳ ಕಾಲ ಪ್ರಕರಣವನ್ನು ತನಿಖೆ ನಡೆಸಿಲ್ಲ. ಒಂದು ಕೊಲೆ ಪ್ರಕರಣದ ತನಿಖೆಯಲ್ಲಿ ಅತಿಯಾದ ವಿಳಂಬವಾಗಿದೆ. ಹಲವು ವರ್ಷಗಳ ಕಾಲ ಸಿಐಡಿ ತನಿಖಾ ಅಧಿಕಾರಿಗಳು ಪ್ರಕರಣವನ್ನು ಮುಟ್ಟಿಲ್ಲ ಎಂದು ನ್ಯಾ.ರಾಜೀವ್ ರಂಜನ್ ಪ್ರಸಾದ್ ತಿಳಿಸಿದ್ದರು.
ಇದನ್ನೂ ಓದಿ: ಹಜ್ ಯಾತ್ರೆಯಲ್ಲಿ ವಿಐಪಿ ಕೋಟಾ ನಿಲ್ಲಿಸಲು ಕೇಂದ್ರ ಸರ್ಕಾರ ನಿರ್ಧಾರ: ಸ್ಮೃತಿ ಇರಾನಿ