ಪಾಟ್ನಾ: ಉದ್ಯೋಗ ಹಗರಣ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಮಾಜಿ ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಹಾರ ಸರ್ಕಾರದ ಇತರ ಹಿರಿಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಪ್ರಕರಣದ ಸಂಬಂಧ ದೂರು ನೀಡಲು 1987ರ ಬ್ಯಾಚ್ ಬಿಹಾರ ಕೇಡರ್ ಐಎಎಸ್ ಅಧಿಕಾರಿ ಗಾರ್ಡನಿಬಾಗ್‌ನಲ್ಲಿರುವ ಎಸ್‌ಸಿ-ಎಸ್‌ಟಿ ಪೊಲೀಸ್ ಠಾಣೆಗೆ ಆಗಮಿಸಿದ್ದು, ಈ ವೇಳೆ ಗಲಭೆ ಉಂಟಾಯಿತು. ಪ್ರಸ್ತುತ ಕಂದಾಯ ಮಂಡಳಿಯಲ್ಲಿ ಹೆಚ್ಚುವರಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಸುಧೀರ್ ಅವರು ಪೊಲೀಸ್ ಠಾಣೆಯಲ್ಲಿ ನಾಲ್ಕು ಗಂಟೆಗಳ ಕಾಲ ಕುಳಿತಿದ್ದಾರೆ. ಏಕೆಂದರೆ ಪೊಲೀಸ್ ಠಾಣೆಯ ಎಸ್‌ಎಚ್‌ಒ, ಸುಧೀರ್ ಅವರು ನೀಡಿದ ದೂರನ್ನು ತೆಗೆದುಕೊಂಡಿರಲಿಲ್ಲ ಎನ್ನಲಾಗ್ತಿದೆ.
ಈ ಬಗ್ಗೆ ಮಾತನಾಡಿದ ಸುಧೀರ್, “ನಾನು ಮಧ್ಯಾಹ್ನ 12ಗಂಟೆಗೆ ಇಲ್ಲಿಗೆ ಬಂದಿದ್ದೇನೆ. ಸುಮಾರು 4 ಗಂಟೆಗಳಿಂದ ಕಾಯುತ್ತಿದ್ದರೂ ಸಹ ನನ್ನ ದೂರನ್ನು ಪೊಲೀಸರು ಪಡೆದಿಲ್ಲ. ಎಫ್ಐಆರ್ ದಾಖಲಿಸಿಲ್ಲ. ಎಫ್‌ಐಆರ್ ದಾಖಲಿಸುವುದಾಗಿ ಪೊಲೀಸ್ ಅಧಿಕಾರಿಗಳು ನನಗೆ ಒಂದು ರಶೀದಿ ನೀಡಿದ್ದಾರೆ. ಇವೆಲ್ಲವೂ ಸತ್ಯ ಮರೆಮಾಚಲು ಮಾಡುತ್ತಿರುವ ತಂತ್ರ" ಎಂದರು.
ಈ ಮೊದಲು ಪ್ರಧಾನ ಕಾರ್ಯದರ್ಶಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸುಧೀರ್ ಬಿಹಾರ ಸಿಬ್ಬಂದಿ ಆಯ್ಕೆ ಆಯೋಗ (ಬಿಎಸ್‌ಎಸ್‌ಸಿ) ಉದ್ಯೋಗ ಹಗರಣದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಮೂರು ವರ್ಷಗಳ ಕಾಲ ಬಂಧನಕ್ಕೊಳಗಾಗಿದ್ದರು. 2017 ರ ಫೆಬ್ರವರಿಯಲ್ಲಿ ನಡೆದ ಉದ್ಯೋಗ ಹಗರಣದಲ್ಲಿ ನಿತೀಶ್ ಕುಮಾರ್ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದರು. ಆದಾಗ್ಯೂ, 2020 ರ ಅಕ್ಟೋಬರ್‌ನಲ್ಲಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತು.
ಹಗರಣ ಪ್ರಕರಣದಲ್ಲಿ ತನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಸುಧೀರ್ ಹೇಳಿದ್ದಾರೆ. ಇನ್ನು ಪ್ರತಿಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಈ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.
"ಐಎಎಸ್ ಅಧಿಕಾರಿ ಸಿಎಂ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಲು ಎಲ್ಲಾ ದಾಖಲೆಗಳೊಂದಿಗೆ ಪೊಲೀಸ್ ಠಾಣೆಗೆ ಬಂದರೂ ಸಹ, ಪೊಲೀಸರು ಎಫ್ಐಆರ್ ದಾಖಲಿಸಲಿಲ್ಲ. ಚುನಾವಣೆಯ ಸಮಯದಲ್ಲಿ, ಕೊಲೆ ಪ್ರಕರಣದಲ್ಲಿ ನನ್ನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಾನು 10 ದಿನಗಳ ನಂತರ ಆ ವಿಷಯದಲ್ಲಿ ಕ್ಲೀನ್ ಚಿಟ್ ಪಡೆದೆ. ಪ್ರತಿಪಕ್ಷದ ನಾಯಕನ ವಿರುದ್ಧ ಎಫ್‌ಐಆರ್ ದಾಖಲಿಸಬಹುದಾದರೆ, ಸಿಎಂ ವಿರುದ್ಧ ಏಕೆ ಸಾಧ್ಯವಿಲ್ಲ?. ದೂರು ಸ್ವೀಕರಿಸಿ ಎಫ್‌ಐಆರ್ ದಾಖಲಿಸುವುದು ಪೊಲೀಸ್ ಠಾಣೆಯ ಕಾರ್ಯವಿಧಾನವಾಗಿದೆ. ನಿತೀಶ್ ಜಿ ಯಾಕೆ ತುಂಬಾ ಹೆದರುತ್ತಾರೆ. ರಾಜ್ಯದಲ್ಲಿ ಸಂಪೂರ್ಣ ಸರ್ವಾಧಿಕಾರವಿದೆ" ಎಂದು ಆರೋಪಿಸಿದರು.